ADVERTISEMENT

ಸುಳ್ಳು ಹೆಣೆಯುವ ಮೋದಿ ಸರ್ಕಾರ

ಕಾಂಗ್ರೆಸ್‌ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಅಹಮದ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 10:00 IST
Last Updated 5 ಅಕ್ಟೋಬರ್ 2017, 10:00 IST

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳಿನ ಸರಮಾಲೆ ಹೆಣೆಯುತ್ತಿದೆ ಎಂದು ಕಾಂಗ್ರೆಸ್‌ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವೈ. ಸೈಯದ್ ಅಹಮದ್ ದೂರಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಲ್ಪ ಸಂಖ್ಯಾತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು

ದೇಶದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ತರುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಎಲ್ಲ ಅಂಶಗಳು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರದಾನವಾಗಲಿದೆ ಎಂದು ಭವಿಷ್ಯ ನುಡಿದರು.

ADVERTISEMENT

ಅಲ್ಪ ಸಂಖ್ಯಾತರೆಂದರೆ ಮುಸ್ಲಿಮರು ಮಾತ್ರವಲ್ಲ, ಕ್ರಿಶ್ಚಿಯನ್, ಬೌದ್ಧ, ಜೈನ್‌ ಸಮಾಜದವರೂ ಅಲ್ಪಸಂಖ್ಯಾತರು. ಅಲ್ಪಸಂಖ್ಯಾತರು ಒಂದಾಗಬಾರದು ಎಂದು ಬಿಜೆಪಿ ಮತ್ತು ಸಂಘ ಪರಿವಾರದವರು ಬಯಸುತ್ತಿದ್ದಾರೆ. ಆದರೆ, ಅಲ್ಪಸಂಖ್ಯಾತ ಯುವಕರು ಒಂದಾಗಿ ಮುಂದಿನ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಬೇಕು. ಕಾಂಗ್ರೆಸ್‌ ಚುನಾವಣೆಯಲ್ಲಿ ಜಯಗಳಿಸಲು ಸಹಕಾರ ನೀಡಬೇಕು ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ಮುಖಂಡರಾದ ಎನ್. ರಮೇಶ್, ಆರಿಫ್ ಉಲ್ಲಾ, ವಿಶ್ವನಾಥ್, ಹುಸೇನ್, ಇಕ್ಬಾಲ್, ಹಬೀಬುಲ್ಲಾ, ನಾಗರಾಜ್ ಉಪಸ್ಥಿತರಿದ್ದರು.

ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ:  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸೈಯದ್ ಅಹಮ್ಮದ್ ಭರವಸೆ ವ್ಯಕ್ತ ಪಡಿಸಿದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 62 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕ. ಅಲ್ಪಸಂಖ್ಯಾತ ಮತದಾರರು ಯಾವ ಪಕ್ಷದ ಪರ ಒಲವು ತೋರಿಸುತ್ತಾರೋ ಆ ಪಕ್ಷ ಗೆಲುವು ಸಾಧಿಸುತ್ತದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಜನಪರ ಆಡಳಿತ ನೀಡುತ್ತಿದೆ. ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್ ಪರವಾಗಿ ಒಲವು ತೋರುತ್ತಿದ್ದಾರೆ. ಸಾಮಾನ್ಯ ಜನರೂ ಕಾಂಗ್ರೆಸ್‌ ಮೇಲೆ ವಿಶ್ವಾಸ ಹೊಂದಿದ್ದಾರೆ. ಕಾಂಗ್ರೆಸ್ ಬಿಟ್ಟು ಬೇರೆ ಯಾರಿಗೂ ಅಲ್ಪಸಂಖ್ಯಾತರು ಬೆಂಬಲ ನೀಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಲಬುರ್ಗಿ, ಬೆಳಗಾವಿ, ಕರಾವಳಿ, ಮೈಸೂರು, ಬೆಂಗಳೂರಿನಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಪಕ್ಷದ ಅಲ್ಪಸಂಖ್ಯಾತ ಘಟಕದ ಸಮಾವೇಶ ಹಮ್ಮಿಕೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲೂ ಸಮಾವೇಶ ನಡೆಸಿದ ನಂತರ ಜನವರಿ ಒಳಗೆ ರಾಜ್ಯಮಟ್ಟದಲ್ಲಿ ಸಮಾವೇಶ ಆಯೋಜಿಸುವ ಉದ್ದೇಶವಿದೆ. ಸಮಾವೇಶದಲ್ಲಿ ದೆಹಲಿಯಿಂದ ಪಕ್ಷದ ಪ್ರಮುಖ ನಾಯಕರು ಬರುತ್ತಾರೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.