ADVERTISEMENT

ಸೊರಬ: 3ರಿಂದ ಮುಖ್ಯರಸ್ತೆ ವಿಸ್ತರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 10:05 IST
Last Updated 19 ಅಕ್ಟೋಬರ್ 2011, 10:05 IST

ಸೊರಬ: ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಪ್ರಕ್ರಿಯೆಗೆ ನ. 3ರಿಂದ ಚಾಲನೆ ನೀಡಲಾಗುವುದು. ಮೊದಲ ಹಂತವಾಗಿ ಪಟ್ಟಣ ಪಂಚಾಯ್ತಿ ವೃತ್ತದಿಂದ ಆಂಜನೇಯ ದೇವಸ್ಥಾನದ ವರೆಗೆ ವಿಸ್ತರಣೆ ನಡೆಯಲಿದೆ ಎಂದು ಉಪ ವಿಭಾಗಾಧಿಕಾರಿ ಡಾ.ಪ್ರವೀಣ್‌ಕುಮಾರ್ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ  ಮುಖ್ಯರಸ್ತೆ ನಿವಾಸಿಗಳ ಜತೆ ಚರ್ಚೆ ನಡೆಸಿದ ಅವರು, ಈ ಮೊದಲು ತೀರ್ಮಾನಿಸಿದಂತೆ ರಸ್ತೆಯ ಮಧ್ಯಭಾಗದಿಂದ ಆಚೀಚೆ ತಲಾ 30 ಅಡಿ ಅಳತೆಗೆ ನಿಗದಿಪಡಿಸಲಾಗಿದೆ.

ನಿಗದಿತ ಅಳತೆಯ ಜಾಗವನ್ನು ತೆರವುಗೊಳಿಸಿದ ನಂತರ ಉಳಿಯುವ ಕಟ್ಟಡವನ್ನು ನಿವಾಸಿಗಳು ನವೀಕರಣ ಮಾಡಿಕೊಳ್ಳಬಹುದು. ಭವಿಷ್ಯದಲ್ಲಿ ಕಟ್ಟಡ ನಿರ್ಮಾಣ ಮಾಡುವವರು ಸರ್ಕಾರದ ಆದೇಶದ ಪ್ರಕಾರ ಮಧ್ಯ ರಸ್ತೆಯಿಂದ 40 ಮೀ. ಅಂತರವನ್ನು ಕಾಪಾಡಿಕೊಳ್ಳಬೇಕು.

ವಿಸ್ತರಣೆಗಾಗಿ ತೆರವುಗೊಳಿಸುವ ಕಟ್ಟಡಗಳಿಗೆ ಪರಿಹಾರ ನಿಗದಿಪಡಿಸಲಾಗಿದ್ದು, ಮಂಗಳೂರು ಹಂಚಿನ ಮನೆಗಳಿಗೆ ಪ್ರತಿ ಚದರ ಅಡಿಗೆ ರೂ 330, ಆರ್‌ಸಿಸಿ ಮನೆಗಳಿಗೆ 530, ಮಹಡಿ ಮನೆಗಳ ಮೊದಲ ಅಂತಸ್ತಿಗೆ 480 ಪರಿಹಾರಧನ ದೊರಕಲಿದೆ. 29 ಮನೆ ಮಾಲಿಕರಿಗೆ ಒಟ್ಟು ರೂ 7279917 ಪರಿಹಾರ ಬಿಡುಗಡೆ ಆಗಿದೆ. ಛಾಪಾ ಕಾಗದದ ಮೇಲೆ ನಿಯಮ ಪ್ರಕಾರ ಬರೆದುಕೊಡುವ ಮೂಲಕ ಪರಿಹಾರದ ಚೆಕ್ಕನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು.

ಪಟ್ಟಣದ ಅಭಿವೃದ್ಧಿ ನಿಟ್ಟಿನಲ್ಲಿ ವಿಸ್ತರಣೆ ಕಾರ್ಯಕ್ಕೆ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

30 ಅಡಿಗೆ ವಿಸ್ತರಣೆ ನಿಗದಿಪಡಿಸಿರುವ ಬಗ್ಗೆ ಸಭೆಯಲ್ಲಿ ಕೆಲವರಿಂದ ಆಕ್ಷೇಪ ವ್ಯಕ್ತವಾಯಿತು. ಕೆಲವಾರು ವರ್ಷಗಳ ನಂತರ ಪುನಃ ಇದೇ ಸಮಸ್ಯೆ ಬರಬಾರದು, ನಿವಾಸಿಗಳಿಗೆ ಪದೇಪದೇ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಮೊದಲು ಶಾಸಕರು ಹಾಗೂ ಜಿಲ್ಲಾಧಿಕಾರಿಯೊಂದಿಗೆ 40 ಅಡಿ ನಿಗದಿ ಮಾಡುವಂತೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು.

ಆಗ್ರಹ: 30 ಅಡಿ ವ್ಯಾಪ್ತಿ ಒಳಗೆ ಖಾಲಿ ನಿವೇಶನ ಹೊಂದಿರುವ ಬಡವರಿಗೆ ಪರಿಹಾರ ಒದಗಿಸುವಂತೆ, ತೀರ್ಥಹಳ್ಳಿ ಮಾದರಿಯಲ್ಲಿ ಪರಿಹಾರ ನೀಡುವಂತೆ, ಪರಿಹಾರದ ಕುರಿತು ಅಳತೆ, ದರ ಮೊದಲಾದ ವಿವರಗಳನ್ನು ಸ್ಪಷ್ಟವಾಗಿ ಒದಗಿಸುವಂತೆ ಸಭೆಯಲ್ಲಿದ್ದ ಸಾರ್ವಜನಿಕರು ಆಗ್ರಹಿಸಿದರು. 

ತಹಶೀಲ್ದಾರ್ ಶ್ರೀಧರಮೂರ್ತಿ ಪಂಡಿತ್, ಪ.ಪಂ. ಉಪಾಧ್ಯಕ್ಷ ಪ್ರಶಾಂತಮೇಸ್ತ್ರಿ, ಮುಖ್ಯಾಧಿಕಾರಿ ವೀರೇಶ್‌ಕುಮಾರ್, ಪಿಡಬ್ಲ್ಯೂಡಿ ಎಇಇ ಬಾಲನ್, ಎಇ ಶೇಷಪ್ಪ, ಪ.ಪಂ. ಕಚೇರಿಯಿಂದ ಆಂಜನೇಯ ದೇವಸ್ಥಾದವರೆಗೆ ಇರುವ ಮನೆಗಳ ಮಾಲೀಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.