ADVERTISEMENT

ಹಸಿರೀಕರಣ: ದುರುಪಯೋಗದ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 11:10 IST
Last Updated 13 ಸೆಪ್ಟೆಂಬರ್ 2011, 11:10 IST

ಶಿವಮೊಗ್ಗ: ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲಾದ್ಯಂತ 2010-11ನೇ ಸಾಲಿನಲ್ಲಿ ಹಮ್ಮಿಕೊಂಡಿದ್ದ 1 ಕೋಟಿ ಸಸಿ ನೆಡುವ `ಹಸಿರೀಕರಣ~ ಯೋಜನೆ ಸಮರ್ಪಕ ಅನುಷ್ಠಾನಗೊಳ್ಳದೇ ಸಾಕಷ್ಟು ಹಣ ವ್ಯರ್ಥವಾದ ಅಂಶ ಸೋಮವಾರ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು.   

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ. ಅಶೋಕನಾಯ್ಕ ಈ ವಿಷಯ ಪ್ರಸ್ತಾಪಿಸಿ, ಶಿವಮೊಗ್ಗ ತಾಲ್ಲೂಕು ಚೋರಡಿ ವ್ಯಾಪ್ತಿಯ ಶೆಟ್ಟಿಕೇರಿಯ ಕಾಡಿನಲ್ಲಿ ಗಿಡ ನೆಟ್ಟ ಉದಾಹರಣೆಗಳಿವೆ. ಇಡೀ ಜಿಲ್ಲೆಯಲ್ಲಿ ಇದೇ ರೀತಿ ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಸಿ ನೆಡಲು ಜಾಗ ಇದೆ ಅಥವಾ ಇಲ್ಲ ಎಂಬುದನ್ನು ನೋಡಿಕೊಳ್ಳದೇ ಸಸಿ ವಿತರಿಸಲಾಗಿದೆ. ಕೆಲವು ಕಡೆ ಗಿಡಗಳನ್ನು ನೆಟ್ಟರೆ, ಬಹುಕಡೆಗಳಲ್ಲಿ ಸಸಿ ನೆಡದೆ ಹಾಳಾಗಿವೆ. ಇದಕ್ಕೆ ಅರಣ್ಯ ಇಲಾಖೆ, ತೋಟಗಾರಿಕೆ, ಕೃಷಿ ಮತ್ತು ಜಲಾನಯನ ಇಲಾಖೆಗಳಲ್ಲಿನ ಸಮನ್ವಯದ ಕೊರತೆಯೇ ಕಾರಣ ಎಂದು ಆಶೋಕನಾಯ್ಕ ಆರೋಪಿಸಿದರು.

ಹಸಿರೀಕರಣ ಯೋಜನೆ ಅನುಷ್ಠಾನ ಕುರಿತು ತನಿಖೆ ನಡೆಸಲು ನೇಮಿಸಿದ್ದ ಜಿ.ಪಂ. ಸದಸ್ಯರ ಸಮಿತಿ ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ತಿಳಿಸಿದರು.  

ಜಿಲ್ಲೆಯಲ್ಲಿ ಪೊಟ್ಯಾಷ್ ಕೊರತೆ ಇದೆ. ಮಂಗಳೂರಿನಿಂದ ಈಗ ಅದನ್ನು  ತರಿಸಿಕೊಳ್ಳಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿ ನೀಡುತ್ತಿದ್ದಂತೆ ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಬೆಲೆಗೆ ರಸಗೊಬ್ಬರವನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದರು.

2010ರ ಏಪ್ರಿಲ್‌ಗೂ ಮುನ್ನ ಆಯಾ ರಸಗೊಬ್ಬರ ಕಂಪೆನಿಗಳೇ ಸಾಗಣೆ ವೆಚ್ಚವನ್ನು ಭರಿಸುತ್ತಿದ್ದವು. ಆದರೆ, ಅದರ ನಂತರ ಸಾಗಣೆ ವೆಚ್ಚವನ್ನು ಮಾರಾಟಗಾರರೇ ಭರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಚೀಲಕ್ಕೆ ್ಙ 15ರಿಂದ 20 ಹೆಚ್ಚುವರಿ ಆಗಿ ತೆಗೆದುಕೊಳ್ಳಲಾಗುತ್ತಿದೆ.

ಹೆಚ್ಚಿನ ದರ ನಿಗದಿ ಮಾಡಿ ಮಾರಾಟ ಮಾಡುತ್ತಿದ್ದ 15 ಅಂಗಡಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಇದಕ್ಕಾಗಿ ವಿಚಕ್ಷಣಾ ದಳ ರಚಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದರು.

ಗ್ರಾಮವಾರು ಪಡಿತರ ಚೀಟಿಗಳ ಮ್ಯಾಪಿಂಗ್ ಕಾರ್ಯ ಶೇ. 96ರಷ್ಟು ಆಗಿದ್ದು, ಇನ್ನೊಂದು ವಾರದಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ. ಇದಾದ ನಂತರ ಹೊಸದಾಗಿ ಪಡಿತರಚೀಟಿ ನೀಡುವ ಕಾರ್ಯ ಆರಂಭಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶ್ರೀಧರ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಸಕಾಲದಲ್ಲಿ ಸಾಲ ವಿತರಿಸುತ್ತಿಲ್ಲ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರಪ್ಪ ಎತ್ತಿದ್ದ ಆಕ್ಷೇಪಕ್ಕೆ, ಆ ರೀತಿ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಲೀಡ್‌ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಜಿಪಂ ಯೋಜನಾಧಿಕಾರಿ ಶಂಕರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.