ADVERTISEMENT

ಹೆಗಲತ್ತಿ ಭೂ ಮಂಜೂರಾತಿ ವಿರುದ್ಧ ನಿರ್ಣಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:49 IST
Last Updated 19 ಡಿಸೆಂಬರ್ 2012, 9:49 IST

ತೀರ್ಥಹಳ್ಳಿ: ತಾಲ್ಲೂಕಿನ ಮಂಡಗದ್ದೆ ಹೋಬಳಿ ಹೆಗಲತ್ತಿ ಗ್ರಾಮದ ಸರ್ವೇ ನಂ: 47ರಲ್ಲಿ 162 ಎಕರೆ ಭೂ ಮಂಜೂರಾತಿ ಪ್ರಕರಣ ಸಂಬಂಧ ಸರ್ಕಾರ ಸಿಬಿಐ ಅಥವಾ ನ್ಯಾಯಾಂಗ ವಿಚಾರಣೆ ನಡೆಸಬೇಕು ಎಂದು ಮಂಗಳವಾರ  ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಕಿಮ್ಮನೆ ರತ್ನಾಕರ್ ಅಧ್ಯಕ್ಷತೆಯಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಭೂ ನ್ಯಾಯ ಮಂಡಳಿ ಈ ಮಂಜೂರಾತಿಯನ್ನು ನೀಡಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಆ ಕುರಿತು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರನ್ನು ಏಕೆ ತಗಲು ಹಾಕಲಾಗುತ್ತಿದೆಯೋ ಗೊತ್ತಿಲ್ಲ. ಯಾರು ತಪ್ಪಿತಸ್ಥರಿದ್ದಾರೋ ಅವರ ವಿರುದ್ಧ ಕ್ರಮ ಆಗಲಿ. ನನ್ನ ಕಾರ್ಯ ಕ್ಷೇತ್ರ ಅದರ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದು ಕಿಮ್ಮನೆ ರತ್ನಾಕರ್ ಸಭೆಗೆ ತಿಳಿಸಿದರು.

ತಕ್ಷಣ, ಕೆಡಿಪಿ ಸದಸ್ಯ ಮಾರ್ತಾಂಡ ಅವರು, ಈ ವಿಷಯ ಸಭಾ ನಡಾವಳಿಯಲ್ಲಿ ಇಲ್ಲ. ಇದನ್ನು ಏಕೆ ಪ್ರಸ್ತಾಪಿಸುತ್ತಿದ್ದೀರಿ ಎಂದು ಪ್ರಶ್ನಿಸಿ, ಶಾಸನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡುವುದು ಒಳಿತು ಎಂದರು.

ಇದಕ್ಕೆ ಉತ್ತರಿಸಿದ ಶಾಸಕರು, ಈ ವಿಚಾರವನ್ನು ಪ್ರಸ್ತಾಪಿಸುವುದರಲ್ಲಿ ತಪ್ಪೇನಿದೆ. ಮಂಜೂರಾತಿಯಲ್ಲಿ ನನ್ನ ಪಾತ್ರವಿದೆ ಎಂದು ಆರೋಪಿಸಲಾಗುತ್ತಿದೆ. ಅದಕ್ಕೆ ಉತ್ತರಿಸಿದ್ದೇನೆ. ಸಮಗ್ರ ತನಿಖೆ ಆಗಬೇಕು ಎಂಬುದು ನನ್ನ ಉದ್ದೇಶ ಎಂದರು.

ಸಣ್ಣ ನೀರಾವರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ. ಹಲವಾರು ಸಭೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರೂ ಕ್ರಮ ಜರುಗಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಟಿ.ಎಲ್. ಸುಂದರೇಶ್, ಕೆಡಿಪಿ ಸದಸ್ಯ ಸಚ್ಚಿಂದ್ರಹೆಗ್ಡೆ ದೂರಿದರು. ಒಪ್ಪಂದ ಆಧಾರದ ಮೇಲೆ ಗುತ್ತಿಗೆಯನ್ನು ನೀಡಲಾಗುತ್ತಿದೆ. 8 ಕೋಟಿ 61ಲಕ್ಷ ಕಾಮಗಾರಿಗೆ 9 ಕೋಟಿ 91 ಲಕ್ಷದ ಅನುಮೋದನೆ ನೀಡಲಾಗಿದೆ. ಒಪ್ಪಂದಕ್ಕೆ ಅವಕಾಶವಿದ್ದರೆ ಕಾಮಗಾರಿಗೆ ಟೆಂಡರ್ ಕರೆಯುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಇಲಾಖೆ ಕಾಮಗಾರಿ ಕುರಿತು ಲೊಕಾಯುಕ್ತ ತನಿಖೆಗೆ ನಿರ್ಣಯ ಕೈಗೊಳ್ಳಲಾಯಿತು.

ಕೆರೆಗಳ ಪುನರ್ಜೀವನ ಕಾರ್ಯಕ್ರಮಗಳ ಅಡಿಯಲ್ಲಿ ಅಕ್ರಮ ಎಸಗಲಾಗಿದೆ.  3 ಕೋಟಿ  70 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 52 ಲಕ್ಷ ಖರ್ಚು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಹಾರೋಗೊಳಿಗೆ ಪದ್ಮನಾಭ್. ಯಲ್ಲಪ್ಪ ದೂರಿದರು.
ಬಗರ್‌ಹುಕುಂ ಭೂ ಸಾಗುವಳಿ  ಮಂಜೂರಾತಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಹಣ ಕೇಳುತ್ತಿದ್ದಾರೆ ಎಂದು ಸದಸ್ಯರು ದೂರಿದರು.  

ಈ ಕುರಿತು ಧ್ವನಿ ಮುದ್ರಿಕೆಯನ್ನು ಸಭೆಯಲ್ಲಿ ಕೇಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕಿಮ್ಮನೆ ರತ್ನಾಕರ್ ಅವರು ಅಧಿಕಾರಿಯ ವಿರುದ್ಧ ಕಿಡಿಕಾರಿದರು. ಇಂಥಹ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಸೂಕ್ತ ತನಿಖೆ ಕೈಗೊಳ್ಳವಂತೆ ತಹಶೀಲ್ದಾರ್‌ಗೆ ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜೀನಾವಿಕ್ಟರ್ ಡಿಸೋಜ, ಉಪಾಧ್ಯಕ್ಷ ಕಟ್ಟೆಹಕ್ಕಲು ಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಳೆಹಳ್ಳಿ ಪ್ರಭಾಕರ್, ತಹಶೀಲ್ದಾರ್ ಗಣೇಶಮೂರ್ತಿ ಹಾಗೂ ವಿವಿಧ ಇಲಾಖೆಯ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.