ADVERTISEMENT

ಹೆಗ್ಗೋಡು: ಚರಕ ಉತ್ಸವದ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 6:40 IST
Last Updated 22 ಜನವರಿ 2011, 6:40 IST

ಸಾಗರ: ಕಾಯಕ ಸಂಸ್ಕೃತಿಗಿಂತ ಶ್ರೇಷ್ಠವಾದ ಸಂಸ್ಕೃತಿ ಮತ್ತೊಂದಿಲ್ಲ ಎಂದು ಹಿರಿಯ ರಂಗ ಕಲಾವಿದೆ ಸುಭದ್ರಮ್ಮ ಮನ್ಸೂರ್ ಹೇಳಿದರು. ಇಲ್ಲಿಗೆ ಸಮೀಪದ ಹೆಗ್ಗೋಡಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕೇಂದ್ರ ಸಂಗೀತ ನಾಟಕ ವಿಭಾಗ ಬೆಂಗಳೂರು ಹಾಗೂ ಚರಕ ಮಹಿಳಾ ಸಹಕಾರ ಸಂಘ ಹಮ್ಮಿಕೊಂಡಿರುವ ಚರಕ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಯಕವೇ ಕೈಲಾಸ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿದವರ ಜೀವನ ಯಾವತ್ತೂ ಹಸನಾಗಿರುತ್ತದೆ. ಈ ಸಿದ್ಧಾಂತದ ಮೂಲಕವೇ ಮಹಿಳೆಯರೆ ಮುಂಚೂಣಿಯಲ್ಲಿ ನಿಂತು ಚರಕ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಅತಿಥಿಯಾಗಿದ್ದ ರೈತ ಮುಖಂಡ ಕಡಿದಾಳು ಶಾಮಣ್ಣ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಒಡನಾಟ ಮನುಷ್ಯನನ್ನು ಹೆಚ್ಚು ಕ್ರಿಯಾಶೀಲವಾಗಿ ಇಡುತ್ತದೆ. ಚರಕದಲ್ಲಿ ವರ್ಷಪೂರ್ತಿ ಹೆಣ್ಣು ಮಕ್ಕಳು ಕೆಲಸ ಮಾಡುವ ಜೊತೆಗೆ ಸಾಂಸ್ಕೃತಿಕವಾಗಿಯೂ ವಿವಿಧ ರೀತಿಯ ಚಟುವಟಿಕೆಯಲ್ಲಿ ತೊಡಗಿರುವುದು ಅವರ ವ್ಯಕ್ತಿತ್ವ ವೃದ್ಧಿಸಲು ಕಾರಣವಾಗಿದೆ ಎಂದರು.

ಕಲಾಕ್ಷೇತ್ರದಲ್ಲಿ ನಿಜವಾದ ಸೇವೆ ಮಾಡಿರುವವರನ್ನು ಸರ್ಕಾರ ಗುರುತಿಸಬೇಕಿದೆ. ತಮ್ಮ ಜೀವನವನ್ನೆ ರಂಗಭೂಮಿಯನ್ನು ಮುಡಿಪಾ ಗಿಟ್ಟಿರುವ ಸುಭದ್ರಮ್ಮ ಅವರಂತಹ ಹಿರಿಯ ಕಲಾವಿದೆಗೆ ಈವರೆಗೆ ಸರ್ಕಾರದ ಯಾವುದೇ ನೆರವು ಅಥವಾ ಪ್ರಶಸ್ತಿ ದೊರಕದೆ ಇರುವುದು ವಿಷಾದದ ಸಂಗತಿ. ಸರ್ಕಾರ  ಈಗಲಾದರೂ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕೆ.ಮರುಳಸಿದ್ದಪ್ಪ ಮಾತನಾಡಿ, ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಗಾಂಧೀಜಿ ಚರಕವನ್ನು ಚಳವಳಿಯ ಚಿಹ್ನೆಯಾಗಿ ಬಳಸಿಕೊಂಡರು. ಈಗಾಗಲೆ ರಂಗಭೂಮಿ ಮೂಲಕ ದೇಶದ ಭೂಪಟದಲ್ಲಿ ಮಹತ್ವದ ಸ್ಥಾನ ಪಡೆದಿರುವ ಹೆಗ್ಗೋಡು ಚರಕ ಸಂಸ್ಥೆಯ ಮೂಲಕ ಮತ್ತೊಂದು ರೀತಿಯ ವಿಶಿಷ್ಟ ಸಾಧನೆಗೆ ಮುಂದಾಗಿದೆ ಎಂದರು.

ಚರಕ ಸಂಸ್ಥೆಯಲ್ಲಿ ದುಡಿಮೆ ಹಾಗೂ ಕಲೆ ಒಟ್ಟೊಟ್ಟಿಗೆ ಹೋಗುವ ರೀತಿಯಲ್ಲಿ ಚಟುವಟಿಕೆಗಳನ್ನು ರೂಪಿಸುವ ಮೂಲಕ ಮೇಲ್ಪಂಕ್ತಿ ಹಾಕಲಾಗಿದೆ. ಇತರ ಸಂಘಟನೆಗಳು ಇದೇ ಮಾದರಿಯನ್ನು ಅನುಸರಿಸಬಹುದು ಎಂದು ಹೇಳಿದರು.

ಮಧುರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಭಾಗೀರಥಿ ಸ್ವಾಗತಿಸಿದರು. ಎಂ.ಎಸ್.ಗಾಯತ್ರಿ ವಂದಿಸಿದರು. ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು. ಗದಗದ ಗ್ರಾಮದೇವಿ ಯುವಕ ಮಂಡಳದ ಸದಸ್ಯರು ಗೀಗೀ ಪದ ಹಾಡಿದರು. ಸುಭದ್ರಮ್ಮ ಮನ್ಸೂರ್ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ತಿಳುವಳ್ಳಿಯ ವಿದ್ಯಾನಿಕೇತನ ಸಂಸ್ಥೆಯಿಂದ ಶ್ರೀಪಾದ್‌ಭಟ್ ನಿರ್ದೇಶನದಲ್ಲಿ ‘ಪಂಜರಶಾಲೆ’ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.