ADVERTISEMENT

ಹೈನುಗಾರಿಕೆಗೆ ಹೆಚ್ಚು ಒತ್ತುನೀಡಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:55 IST
Last Updated 20 ಅಕ್ಟೋಬರ್ 2012, 8:55 IST

ಶಿಕಾರಿಪುರ: ಮಹಿಳೆಯರು ಹೈನುಗಾರಿಕೆ ಕಡೆ ಹೆಚ್ಚಿನ ಗಮನ ನೀಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಮಾಜಿ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.

ತಾಲ್ಲೂಕಿನ ಚುಂಚಿನಕೊಪ್ಪ, ಹೋತನಕಟ್ಟೆ, ಮಲ್ಲಾಪುರ ಹಾಗೂ ಮುಡಬ ಸಿದ್ದಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ತಾಲ್ಲೂಕಿನ ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಗ್ರಾಮಸ್ಥರ ಶಾಲಾ ಕಟ್ಟಡ ಹಾಗೂ ದೇವಸ್ಥಾನ ಬೇಡಿಕೆಗಳಿಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ಹಸು ಹಾಗೂ ಎಮ್ಮೆಗಳನ್ನು ಕೊಳ್ಳಲು ಸಾಲ ನೀಡುವಂತೆ ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರಿಗೆ ಈಗಾಗಲೇ ತಿಳಿಸಿದ್ದು, ನಾಳೆ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದು ಹೈನುಗಾರಿಕೆಗೆ ಮಹಿಳೆಯರಿಗೆ ಸಾಲ ನೀಡುವ ಬಗ್ಗೆ ಅವರ ಜತೆ ಚರ್ಚಿಸುತ್ತೇನೆ ಎಂದರು.

ಇಂದು ಬಗರ್‌ಹುಕುಂ ಪರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಭೆ ನಡೆಸುತ್ತಿರುವ ಕಾಗೋಡು ತಿಮ್ಮಪ್ಪ ತಾವೇ ಸಚಿವರಾಗಿ,  ಎಸ್.ಎಂ. ಕೃಷ್ಣ ಅವರೇ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಏಕೆ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್ ಬಗರ್‌ಹುಕುಂ ಜಮೀನು ಬಗ್ಗೆ ಕಠಿಣ ಕಾನೂನುಗಳನ್ನು ಮಾಡಿರುವುದರಿಂದ ಯಾರೇ ಮುಖ್ಯಮಂತ್ರಿ ಆದರೂ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಆದರೆ,  ನಾನು ಜೀವಂತವಾಗಿರುವವರೆಗೂ ಹಿಂದಿನಿಂದ ಸಾಗುವಳಿ ಮಾಡಿ ಕೊಂಡು ಬರುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದರು.

ಚುನಾವಣೆ ಸಮಯ ನಾನು ರಾಜ್ಯಾದ್ಯಂತ ಪ್ರವಾಸ ಮಾಡುವುದರಿಂದ ಎಲ್ಲ ಸಮುದಾಯದ ಮುಖಂಡರು ಪೂರ್ಣ ಜವಾಬ್ದಾರಿ  ತೆಗೆದುಕೊಂಡು ಚುನಾವಣೆಯಲ್ಲಿ ನನ್ನ ಪರವಾಗಿ ಓಡಾಡಬೇಕು, ಒಂದು ಓಟು ಬೇರೆ ಕಡೆ ಹೋಗಬಾರದು ಎಂದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಎಸ್. ಗುರುಮೂರ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಂಗಾರಿನಾಯ್ಕ, ಮಾಜಿ ಸದಸ್ಯರಾದ ಕೆ. ಹಾಲಪ್ಪ, ಗಾಯತ್ರಿ ದೇವಿ, ಎಪಿಎಂಸಿ ಅಧ್ಯಕ್ಷ ಸುಕೇಂದ್ರಪ್ಪ, ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ. ವಸಂತಗೌಡ್ರು, ಬಿ.ಎಚ್. ನಾಗರಾಜ್, ನಿವೇದಿತಾ, ಅಂಬಾರಗೊಪ್ಪ ಶೇಖರಪ್ಪ, ರೇಖಾ ರಾಜಶೇಖರ್, ರುದ್ರಪಯ್ಯ, ತಹಶೀಲ್ದಾರ್ ಕೆ.ಎಚ್. ಶಿವಕುಮಾರ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.