ADVERTISEMENT

ಹೊಸದಾರಿ ಕಡೆ ಮುಖಮಾಡಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 10:10 IST
Last Updated 10 ಏಪ್ರಿಲ್ 2012, 10:10 IST

ತುಮರಿ: ಮುಳುಗಡೆಯ ಜನರು ತಮ್ಮ ದ್ವೀಪದ ಸ್ಥಿತಿಯನ್ನು ಕಂಡು ಮರುಕಗೊಳ್ಳುವ ಮನಸ್ಥಿತಿಯಿಂದ ಹೊರಬಂದು ಬದಲಾದ ವರ್ತಮಾನದ ಜತೆ ಅನುಸಂಧಾನ ನಡೆಸುವ ಹೊಸದಾರಿಗಳ ಕಡೆ ಮುಖ ಮಾಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾರ್ಮಿಕವಾಗಿ ನುಡಿದರು.

ಗೋಪಾಲಗೌಡ ರಂಗಮಂದಿರದಲ್ಲಿ ಹಿನ್ನೀರ ದನಿ ಸಾಮಾಜಿಕ ಸಂಘಟನೆ ಹಮ್ಮಿಕೊಂಡಿದ್ದ ನಾಲ್ಕು ದಿನಗಳ `ಹಿನ್ನೀರ ಹಬ್ಬ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಲದ ಜತೆಗೆ ಕ್ರಮಿಸುವುದು ನಮ್ಮ ನಿತ್ಯದ ತುರ್ತಾಗಿದೆ, ಯಾವ ದ್ವೀಪವು ನಿಮ್ಮ ಪಾಲಿಗೆ ಸಂಕಷ್ಟ ಸರಪಳಿಯನ್ನು ಸುತ್ತಿದಿಯೋ ಅದೇ ಪ್ರದೇಶ ಪಟ್ಟಣದ ಮಂದಿಗೆ ಆಕರ್ಷಣೆಯನ್ನು ಹುಟ್ಟಿಸುತ್ತಿದೆ. ಅದನ್ನು ಬಿಡಿಸಿಕೊಳ್ಳುವ ಸವಾಲು ಮಾತ್ರ ನಮ್ಮ ಮುಂದಿದೆ ಎಂದರು.

ವಿದ್ಯಾವಂತ ಯುವ ಜನತೆ ಹಳ್ಳಿಯಿಂದ ಡೆಲ್ಲಿಯೆಡೆ ಧಾವಿಸುತ್ತಿರುವ ಹೊತ್ತಿನಲ್ಲೇ ನಗರದ ಏಕತಾನತೆಯ ಬಂಜೆತನಕ್ಕೆ ಮದ್ದು, ಎಂಬಂತೆ ಹಳ್ಳಿಗಳು ಪಟ್ಟಣಿಗರನ್ನು ಸೆಳೆಯುತ್ತಿದೆ. ಅದನ್ನು ಪ್ರವಾಸಿತಾಣದಂತ ಆರ್ಥಿಕತೆಗೆ ಪೂರಕ ನೆಲವನ್ನಾಗಿ ನಾವು ಬದಲಾಯಿಸಿ ಕೊಳ್ಳಬೇಕು ಎಂದು ವಿವರಿಸಿದರು.

ಕೆ.ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. `ಹಿನ್ನೀರ ದನಿ~ ಅಧ್ಯಕ್ಷ ಪಟೇಲ್ ಸುಭ್ರಾವ್ ದ್ವೀಪದ ಕುಂದುಕೊರತೆ ಬಗ್ಗೆ ಮನವಿ ಸಲ್ಲಿಸಿದರು.

ನಂತರ, ನಡೆದ ಹುಟ್ಟೂರ ನೆನಪು ಕಾರ್ಯಕ್ರಮದಲ್ಲಿ ಕಿಡುದುಂಬೆ ರಾಮಚಂದ್ರಪ್ಪ, ಡಾ.ಜಯಪ್ರಕಾಶ ಮಾವಿನಕುಳಿ, ಡಾ.ತಿರುಮಲ ಮಾವಿನಕುಳಿ ಮುಂತಾದವರು ಮುಳುಗಡೆಯ ನೆನಪನ್ನು ಹಂಚಿಕೊಂಡರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.