ADVERTISEMENT

ಹೊಸನಗರ: ಸ್ವಸಹಾಯ ಸಂಘಗಳಿಗೆ ಹೆಚ್ಚುಸಾಲ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 5:05 IST
Last Updated 18 ಅಕ್ಟೋಬರ್ 2012, 5:05 IST

ಹೊಸನಗರ: ಗೃಹ ಕೈಗಾರಿಕೆಗಳ ಅಭಿವೃದ್ಧಿ ಪಡಿಸುವ ಮೂಲಕ ಗ್ರಾಮೀಣ ಬದುಕನ್ನು ಮರು ಕಟ್ಟುವ ಪ್ರಯತ್ನ ಆಗಬೇಕಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ಅಭಿಪ್ರಾಯಪಟ್ಟರು.

ಬುಧವಾರ ತಾಲ್ಲೂಕಿನ ನಗರ ಎಂಬಲ್ಲಿ ಕೊಡಚಾದ್ರಿ ಸ್ವಸಹಾಯ ಸಂಘಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸನಗರ ತಾಲ್ಲೂಕಿನಲ್ಲಿ ಸುಮಾರು 1,100ಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಅಳಿವಿನಂಚಿನಲ್ಲಿರುವ ಗ್ರಾಮೀಣ ಬದುಕಿಗೆ ಸಹಾಯ ಹಸ್ತ ನೀಡುವ ಕಾಯಕವನ್ನು ಕೊಡಚಾದ್ರಿ ಟ್ರಸ್ಟ್ ಮಾಡುತ್ತಿದೆ ಎಂದರು.

ಈ ವರ್ಷದಿಂದ ವಿವಿಧ ಉದ್ದೇಶಗಳಿಗಾಗಿ ಸ್ವಸಹಾಯ ಸಂಘಗಳಿಗೆ ಸುಮಾರು ಶೇ 4ರ ಬಡ್ಡಿ ದರದಂತೆ ರೂ 3 ಲಕ್ಷದವರೆಗೆ ಸಾಲ ನೀಡಲು ಡಿಸಿಸಿ ಬ್ಯಾಂಕ್ ಸಿದ್ಧವಾಗಿದೆ ಎಂದರು.

ಈ ವರ್ಷದಿಂದ ಕೊಡಚಾದ್ರಿ ಯುವ ವೇದಿಕೆಯನ್ನು ಹುಟ್ಟು ಹಾಕುವ ಮೂಲಕ ನಗರಕ್ಕೆ ವಿವಿಧ ಕಾರಣಗಳಿಗಾಗಿ ಹಳ್ಳಿಯಿಂದ ಪಲಾಯನ ಮಾಡುತ್ತಿರುವ ಯುವ ಜನತೆಗೆ ಕಡಿವಾಣ ಹಾಕಿ ಅವರಿಗೆ ಆಸರೆ ನೀಡುವ ಕೆಲಸವನ್ನು ಕೊಡಚಾದ್ರಿ ಟ್ರಸ್ಟ್ ಆರಂಭಿಸಿದೆ ಎಂದು ನುಡಿದರು.

ನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನೀಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್, ಕೊಡಚಾದ್ರಿ ಟ್ರಸ್ಟ್ ನಿರ್ದೇಶಕ ಹರತಾಳು ನಾಗರಾಜ್, ತಾ.ಪಂ. ಮಾಜಿ ಉಪಾಧ್ಯಕ್ಷ ಕಾನ್‌ಬೈಲ್ ದೇವೇಂದ್ರ ಗೌಡ, ನಗರ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷ ಸತೀಶ್ ಹಾಜರಿದ್ದರು.
ನೇಮಿರಾಜ್ ಸ್ವಾಗರಿಸಿದರು. ವಿಷ್ಣುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.