ADVERTISEMENT

‘ಅಡಿಕೆ ಬೆಳೆಗಾರರ ರಕ್ಷಣೆ ಸರ್ಕಾರದ ಹೊಣೆ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:56 IST
Last Updated 20 ಡಿಸೆಂಬರ್ 2013, 6:56 IST

ಸೊರಬ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಅಡಿಕೆ ನಿಷೇಧ ಮಾಡುವುದಿಲ್ಲ ಎನ್ನುವುದನ್ನು ಕೇವಲ ಹೇಳಿಕೆಯಲ್ಲಿ ಮಾತ್ರ ತಿಳಿಸಿದರೆ ಸಾಲದು ಬದಲಾಗಿ ಅಡಿಕೆ ಬೆಳೆಗಾರರ ನಿಯೋಗವನ್ನು ದೆಹಲಿಗೆ ಕೊಂಡೊಯ್ದು, ರಾಜ್ಯದ ಅಡಿಕೆ ಬೆಳೆಗಾರರ ಸಂಕಷ್ಟವನ್ನು ಕೇಂದ್ರಕ್ಕೆ  ತಿಳಿಸುವ  ಪ್ರಯತ್ನ ಮಾಡಬೇಕು  ಎಂದು  ವಿರೋದ ಪಕ್ಷದ ಮುಖ್ಯ ಸಚೇತಕ ಮಧು ಬಂಗಾರಪ್ಪ ಮನವಿ ಮಾಡಿದರು.

ತಾಲ್ಲೂಕಿನ ಬೆನ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಿನಬಳ್ಳಿಕೊಪ್ಪ ಮತ್ತು ಭದ್ರಾಪುರ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಹಾಗೂ ವಿವಿಧ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿ ಅತಿವೃಷ್ಟಿಯಿಂದ ರಾಜ್ಯದ ರೈತರ ಆರ್ಥಿಕ ಸ್ಥಿತಿ ನೆಲಕಚ್ಚಿದೆ, ಅಡಿಕೆಗೆ ಕೊಳೆ ರೋಗಬಾಧೆಯಿಂದ ನರುಳುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ಅಡಿಕೆ ನಿಷೇಧ ಮಾಡುತ್ತೇವೆ ಎಂದು ಹೇಳಿರುವುದು ಒಂದು ರೀತಿ ರೈತರ ಶೋಷಣೆಗೆ ಮುನ್ನಡಿ ಬರೆದಂತಿದೆ. ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರ ಪರವಾಗಿ ನಿಲ್ಲದೇ ಹೋದರೆ ಜೆಡಿಎಸ್ ವಿರೋಧ ಪಕ್ಷವಾಗಿ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಎಪಿಎಂಸಿ ಖರೀದಿ ಕೇಂದ್ರದಲ್ಲಿ  ರೈತರ ಬೆಳೆಯನ್ನು ಖರೀದಿ ಮಾಡಿದ ತಕ್ಷಣವೇ ಹಣ ನೀಡಬೇಕು. ಬೆಳೆಗೆ ಹಾಕಿದ ಗೊಬ್ಬರ ಮತ್ತು ಔಷಧಿಯನ್ನು ಕೊಂಡುಕೊಳ್ಳವಾಗ ಸಾಲ ಮಾಡಿ ಹಣ ನೀಡಿಯೇ ರೈತರು ಖರೀದಿ ಮಾಡಿರುತ್ತಾರೆ. ಹಾಗಾಗಿ ಸರ್ಕಾರವೂ ಈ ನಿಟ್ಟಿನಲ್ಲಿ ಖರೀದಿ ಕೇಂದ್ರದಲ್ಲಿ ರೈತರಿಗೆ ತಕ್ಷಣ ಹಣ ನೀಡುವ ವ್ಯವಸ್ಥೆಯನ್ನು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನಲ್ಲಿ ರಸ್ತೆ ಮತ್ತು ನೀರಿನ ಸಮಸ್ಯೆಯ ಕೊರೆತೆಯಿದ್ದು, ಹಂತ–ಹಂತವಾಗಿ ನಿವಾರಿಸಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಪೋಷಕರು ಮಕ್ಕಳನ್ನು ಹೆಚ್ಚು ಶಿಕ್ಷಣ ಕೊಡಿಸಲು ಒಲುವು ತೋರಿಸುತ್ತಿದ್ದು, ಸರ್ಕಾರ ಅನ್ನಭಾಗ್ಯ ಯೋಜನೆಗಿಂತ ಮೂಲಸೌಕರ್ಯಗಳಾದ ರಸ್ತೆ, ನೀರು, ಶಿಕ್ಷಣ ಹಾಗೂ ವಿದ್ಯುತ್ ನೀಡುವ ಕಡೆ ಚಿಂತನೆ ಹರಿಸಲಿ ಎಂದರು.
ಬೆನ್ನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್ ಅಧ್ಯಕ್ಷತೆ  ವಹಿಸಿದ್ದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಸವಲಿಂಗಪ್ಪ, ಉಪಾಧ್ಯಕ್ಷೆ ನೀಲಮ್ಮ ಸುರೇಶ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಗಣಪತಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಮಾರಪ್ಪ, ಶಾಂತಪ್ಪ, ಸುಧಾ ಉಮೇಶ್, ಕೆ,ವಿ.ಗೌಡ, ಎಂ,ಡಿ.ಶೇಖರ್, ಎನ್.ಕುಮಾರ್, ಗಣಪತಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.