ADVERTISEMENT

‘ಆಧುನೀಕರಣ; ಅವನತಿಯತ್ತ ಗ್ರಾಮೀಣ ಕಲೆಗಳು’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 5:36 IST
Last Updated 22 ಡಿಸೆಂಬರ್ 2014, 5:36 IST

ಸೊರಬ: ವಿಜ್ಞಾನ, ತಂತ್ರಜ್ಞಾನದ ಪ್ರಭಾವದಿಂದ ಗ್ರಾಮೀಣ ಕಲೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಸರ್ಕಾರ ಗ್ರಾಮೀಣ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಪ್ರೋತ್ಸಾಹ ಧನ ನೀಡುವ ಅವಶ್ಯಕತೆ ಇದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜೈಶೀಲಪ್ಪ ಅಭಿಪ್ರಾಯಪಟ್ಟರು.

ಶನಿವಾರ ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಯುವಜನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಕಲೆಗಳೊಂದಿಗೆ ಇಡೀ ಗ್ರಾಮೀಣ ಸಮುದಾಯದ ಪರಂಪರೆ ಮತ್ತು ಬದುಕು ಅಡಗಿದೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿ ಇಂದಿನ ಆಧುನೀಕರಣದ ಪ್ರಭಾವದಲ್ಲಿ ಒಂದಿಷ್ಟು ಮೌಲ್ಯಗಳು ಉಳಿದಿರುವುದು ಗ್ರಾಮೀಣ ಕಲೆಗಳಿಂದ ಮಾತ್ರ. ಆದ್ದರಿಂದ, ಸರ್ಕಾರ ಕಲಾವಿದರನ್ನು ಹಾಗೂ ಕಲೆಗಳನ್ನು ಉಳಿಸಿ ಬೆಳೆಸಲು ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.

ಇಂದು ಯಾವುದೇ ಚಲನಚಿತ್ರ ಗೀತೆಗಳಿಗೆ  ಹೊಸ ಹೊಸ ಡಿಜಿಟಲ್ ತಂತ್ರಜ್ಞಾನ ಬಳಸಿ ಹಾಡುವ ಗಾಯಕರ ನಡುವೆ ಮೌಖಿಕ ಪರಂಪರೆಯ ಗಾಯಕರು ಮತ್ತು ವಕ್ತಾರರು ಕಣ್ಮರೆ ಯಾಗುತ್ತಿದ್ದಾರೆ. ಯಾವುದೇ ಸಂದರ್ಭದಲ್ಲೂ ಒಂದು ನಾಡಿನ ಐತಿಹ್ಯದ ಬಗ್ಗೆಯಾಗಲಿ, ಚಾರಿತ್ರಿಕ ಸಂಗತಿಯ ಬಗ್ಗೆ ತಿಳಿಸಿಕೊಡುವ ಗ್ರಾಮೀಣ ಕಲಾವಿದರ ಪ್ರತಿಭೆಯನ್ನು ಕೀಳಾಗಿ ಕಾಣದೆ, ಅಂತಹ ಪ್ರತಿಭೆಗಳನ್ನು ಎಲ್ಲರೂ ಗೌರವಿಸಿ, ಪ್ರೋತ್ಸಾಹಿಸಬೇಕು ಎಂದರು.

ಕಸಾಪ ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಗ್ರಾಮೀಣ ಕಲೆಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಉಳಿಸಲು ಯುವಜನ ಮೇಳ ಆಯೋಜಿಸಲಾಗುತ್ತಿದೆ ಎಂದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಎಂ.ಡಿ.ಉಮೇಶ್, ಮಹೇಶಗೌಳಿ, ಮೆಹಬೂಬಿ, ನೌಕರ ಸಂಘದ ಅಧ್ಯಕ್ಷ ಹೊಳೆಲಿಂಗಪ್ಪ, ಕಸಾಪ ಅಧ್ಯಕ್ಷ ಶಿವಾನಂದ ಪಾಣಿ, ಪ್ರಾಂಶುಪಾಲ ಚಿದಂಬರ, ಬಸವರಾಜ, ಮುರಗೇಂದ್ರಚಾರ್, ರೇವಣಪ್ಪ, ಕಾಳಪ್ಪ, ದೀಪಕ್ ಡೊಂಗ್ರೆ, ಶಶಿಕಲಾ, ನೀಲೇಶ್, ರಮೇಶ್, ಸೋಮಶೇಖರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.