ಶಿರಾಳಕೊಪ್ಪ: ಅಲ್ಲಮ ಪ್ರಭು ಕಲೆಯ ಮೂಲಕ ಅಧ್ಯಾತ್ಮಿಕ ಜಗತ್ತಿನತ್ತ ಸಾಮಾನ್ಯ ಜನರನ್ನು ಸೆಳೆಯುವ ಕಾರ್ಯ ಮಾಡಿದ್ದರು ಎಂದು ಚಿತ್ರದುರ್ಗ ಮುರುಘಾಮಠದ ಡಾ:ಶಿವಮೂರ್ತಿ ಮುರುಘ ರಾಜೇಂದ್ರ ಶರಣರು ಹೇಳಿದರು.
ಹತ್ತಿರದ ಮಾಳಗೊಂಡನಕೊಪ್ಪ ಗ್ರಾಮದಲ್ಲಿ ಬುಧವಾರ ನಡೆದ ‘ಕಾರ್ತೀಕ ಮಾಸದಲ್ಲಿ ಸುಜ್ಞಾನದ ಬೆಳಕು’ ಎಂಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಪ್ರಗತಿ ಕಾಣಬೇಕಾದರೆ ನೆನಪಿನ ಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳಬೇಕು. ಅವರಿಗೆ ಸತ್ಯದ ಪರಿಚಯವನ್ನು ಸರಿಯಾಗಿ ಮಾಡಿಕೊಟ್ಟರೆ ಸಾಕು ಜೀವನ ಸ್ವತಃ ರೂಪಿಸಿಕೊಳ್ಳತ್ತಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಶಾಂತವೀರಪ್ಪಗೌಡ ಮಾತನಾಡಿ, ಮಯೂರ ವರ್ಮ, ಅಲ್ಲಮ್ಮ ಪ್ರಭು, ಅಕ್ಕಮಹಾದೇವಿ, ಕೆಳದಿ ಚನ್ನಮ್ಮ ಹುಟ್ಟಿದ ನಾಡಲ್ಲಿ ಜನಿಸಿರುವ ನಾವು ಧನ್ಯರು ಎಂದರು.
ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮಿಜಿ ಮಾತನಾಡಿ, ಹಿಂದೆ ಕಾಡಿನಲ್ಲಿ ಮಠಗಳಿದ್ದರೂ ಭಕ್ತರು ಹುಡಿಕಿಕೊಂಡು ಹೋಗುತ್ತಿದ್ದರು. ಈಗ ಜಗತ್ತು ಬದಲಾಗಿದ್ದು ಮಠಗಳೇ ಭಕ್ತರ ಮನೆಗೆ ಹೋಗಿ ಅಜ್ಞಾನದಲ್ಲಿರುವವರಿಗೆ ಸುಜ್ಞಾನದ ಮಾರ್ಗ ತೋರಿಸು ವಂತಾಗಿದೆ. ಹಾಗಾಗಿ, ಮಠಾಧಿಪತಿ ಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ನುಡಿದರು.
ಜಿಲ್ಲಾ ಪಂಚಾಯ್ತಿ ಕೃಷಿ ಹಾಗೂ ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ದಾನಿ ರುದ್ರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಡಿ ಅಶೋಕ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎ.ಎಸ್.ಪಧ್ಮನಾಭ್ ಭಟ್, ಕಾಳೇನಹಳ್ಳಿ ರೇವಣಸಿದ್ಧ ಸ್ವಾಮಿಜಿ ಮಾತನಾಡಿದರು.
ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮಿಜಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಸಮಾರಂಭದಲ್ಲಿ ತೊಗರ್ಸಿ ಮಹಾಂತ ದೇಶಿಕೇಂದ್ರ ಸ್ವಾಮಿಜಿ, ಹಿರೇಮಾಗಡಿ ಶಿವಮೂರ್ತಿ ಸ್ವಾಮಿಜಿ, ಶಿರಾಳಕೊಪ್ಪ ವಿರಕ್ತಮಠದ ಸ್ವಾಮಿಜಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಜೆ.ಫಕ್ಕಿರಪ್ಪ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ರಟ್ಟಿಹಳ್ಳಿ, ಮುರುಘ ರಾಜ್ ಇದ್ದರು. ಸಾಲೂರು ಕುಮಾರ್, ಸುಭಾಶ್ ಚಂದ್ರ ಸ್ಥಾನಿಕ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.