ಹೊಸನಗರ: ಮಲೆನಾಡಿನ ಕ್ರೀಡಾ ಪಟುಗಳಿಗೆ ಬಾಲ್ಯದಲ್ಲಿಯೇ ವೈಜ್ಞಾನಿಕ ರೀತಿಯಲ್ಲಿ ಕ್ರೀಡಾ ತರಬೇತಿ ನೀಡಿದ್ದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸ ಬಹುದು ಎಂದು ವಿಧಾನಸಭಾದ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಕೊಡಚಾದ್ರಿ ಕ್ರೀಡಾಂಗಣದಲ್ಲಿ ಕುವೆಂಪು ವಿಶ್ವ ವಿದ್ಯಾಲಯದ 27ನೇ ಅಂತರ ಕಾಲೇಜು ಮಹಿಳಾ ಕ್ರೀಡಾಕೂಟ ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾಪಟುಗಳು ಕಠಿಣ ಪರಿಶ್ರಮ, ಇಚ್ಛಾಶಕ್ತಿ ಹಾಗೂ ದೂರದೃಷ್ಠಿ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್ ಎಸ್.ಡಿ. ಈಶನ್ ಮಾತನಾಡಿ, ಆಟದಲ್ಲಿ ಸೋಲು–ಗೆಲುವು ಮುಖ್ಯ ಅಲ್ಲ. ಗುಣ ಮಟ್ಟದ ಸ್ಪರ್ಧೆ ಮುಖ್ಯ. ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವಂತೆ ಅವರು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕರುಣಾಕರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ಶುಭಾ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಾಗರತ್ನಾ ದೇವರಾಜ್ ಮತ್ತಿತರರು ಹಾಜರಿದ್ದರು.
ಕುವೆಂಪು ವಿವಿ ಕ್ರೀಡಾವಿಭಾಗದ ನಿರ್ದೇಶಕ ಪ್ರಕಾಶ್ ಮಾತನಾಡಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಸುಮಾರು 33 ಕಾಲೇಜುಗಳಿಂದ 350ಕ್ಕೂ ಹೆಚ್ಚು ಮಹಿಳಾ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು
ಎಂದರು.
ದೈಹಿಕ ಶಿಕ್ಷಣ ವಿಭಾಗದ ಈಶ್ವರಪ್ಪ ಸ್ವಾಗತಿಸಿದರು. ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.