ADVERTISEMENT

‘ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 9:06 IST
Last Updated 9 ಡಿಸೆಂಬರ್ 2013, 9:06 IST

ಶಿವಮೊಗ್ಗ: ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದರ ಜತೆಗೆ ಉತ್ತಮ ಪ್ರಜೆಗಳಾಗಿ ರೂಪುಗೊಳಿಸ ಬೇಕಾದ ಕರ್ತವ್ಯ ಪ್ರತಿಯೊಬ್ಬ ಪೋಷಕರದ್ದು ಎಂದು ನಟ ಅರುಣ್ ಸಾಗರ್ ಹೇಳಿದರು.

ನಗರದ ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲೆಯ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಮಕ್ಕಳಲ್ಲಿ ಮಾನವೀಯ ಗುಣಗಳು ಕಮರಿಹೋಗುತ್ತಿದ್ದು, ಅಂತಹ ಗುಣಗಳನ್ನು ಬೆಳೆಸುವ ಕಡೆಗೆ ಪೋಷಕರು ಹಾಗೂ ಶಿಕ್ಷಕರು ಮುಂದಾಗಬೇಕು ಎಂದರು.

ವಿದ್ಯೆ ಕಲಿಸಿದ ಗುರು ಹಾಗೂ ತಂದೆ ತಾಯಿಯನ್ನು ವಿದ್ಯಾರ್ಥಿಗಳು ಮರೆಯಬಾರದು. ಶಾಲೆ ಮಕ್ಕಳಿಗೆ ಸಾಂಸ್ಕೃತಿಕ ನೆಲೆಗಟ್ಟನ್ನು ಕಟ್ಟಿಕೊಟ್ಟರೆ, ತಂದೆ ತಾಯಿಗಳು ಅದನ್ನು ಪೋಷಿಸಿ ಬೆಳೆಸುವುದಕ್ಕೆ ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.

ಶಾಸಕ ಕೆ.ಬಿ.ಪ್ರಸನ್ನಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಗುಣಗಳನ್ನು ಬೆಳೆಸಿಕೊಂಡಿರುವ ವಿದ್ಯಾರ್ಥಿ ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕಲಿಯುವ ಸಂದರ್ಭದಲ್ಲಿ ಭೇದಭಾವ ಮರೆತು, ಎಲ್ಲರೊಂದಿಗೆ ಬೆರೆಯುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಶಾಲೆಯಿಂದ ನೂತನವಾಗಿ ಹೊರತಂದಿರುವ ‘ಸೃಷ್ಟಿ–4’ ಸಂಚಿಕೆ ಬಿಡುಗಡೆ ಮಾಡಲಾಯಿತು.

ಸಂಸತ್ ಸದಸ್ಯ ಹಾಗೂ ಪೆಸಿಟ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಬಿ.ವೈ.ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಿಇಎಸ್ ಜಂಟಿ ಕಾರ್ಯದರ್ಶಿ ಎಸ್.ವೈ.ಅರುಣಾ ದೇವಿ, ಪಿಇಎಸ್ ಟ್ರಸ್ಟ್ ಮಾರ್ಗದರ್ಶಕ ಬಿ.ಎಸ್.ಉದಯ ಕುಮಾರ್, ಕೆ.ಆರ್.ಸಿ.ಎಸ್.ನ ಮುಖ್ಯಸ್ಥ ತೇಜಸ್ವಿನಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. 

ಪ್ರಾಂಶುಪಾಲ ಕೃಷ್ಣಮೂರ್ತಿ ಸ್ವಾಗತಿಸಿದರು.  ಡೀನ್ ನಾಗೇಶ್ವರಾವ್ ವಂದಿಸಿದರು. ಪೂನಮ್ ಮತ್ತು ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.