ADVERTISEMENT

‘ರಾಮಾಯಣ ಮುಚ್ಚಿದ ಪುಸ್ತಕವಲ್ಲ...’

ಹೆಗ್ಗೋಡಿನಲ್ಲಿ ‘ನೀನಾಸಂ’ ಸಂಸ್ಕೃತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2013, 5:11 IST
Last Updated 16 ಅಕ್ಟೋಬರ್ 2013, 5:11 IST
ಸಾಗರ ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ’ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ‘ರಾಮಾಯಣದ ಮೌಖಿಕ ಕಥನ ಪರಂಪರೆ’ ಎಂಬ ವಿಷಯದ ಕುರಿತು ಸಂಶೋಧಕಿ ಡಾ.ಪೌಲಾ ರಿಚ್‌ಮನ್‌ ಮಾತನಾಡಿದರು. ಲೇಖಕಿಯರಾದ ಅರ್ಷತಾ ಸತ್ತಾರ್, ಸಮಿತಾ ಅರಣಿ ಭಾಗವಹಿಸಿದ್ದರು.
ಸಾಗರ ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ‘ನೀನಾಸಂ’ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ‘ರಾಮಾಯಣದ ಮೌಖಿಕ ಕಥನ ಪರಂಪರೆ’ ಎಂಬ ವಿಷಯದ ಕುರಿತು ಸಂಶೋಧಕಿ ಡಾ.ಪೌಲಾ ರಿಚ್‌ಮನ್‌ ಮಾತನಾಡಿದರು. ಲೇಖಕಿಯರಾದ ಅರ್ಷತಾ ಸತ್ತಾರ್, ಸಮಿತಾ ಅರಣಿ ಭಾಗವಹಿಸಿದ್ದರು.   

ಸಾಗರ: ‘ಮುಖ್ಯವಾಹಿನಿಯಲ್ಲಿ ಇರುವ ರಾಮಾಯಣಕ್ಕಿಂತ ಮೌಖಿಕ ಕಥನ ಪರಂಪರೆ  ರಾಮಾಯಣಗಳಲ್ಲಿ ಸ್ತ್ರೀವಾದಿ ಸೇರಿದಂತೆ ಹಲವು ಬಗೆಯ ವಿಭಿನ್ನ ದೃಷ್ಟಿಕೋನಗಳನ್ನು ಕಾಣಲು ಸಾಧ್ಯ’ ಎಂದು ಸಂಶೋಧಕಿ ಡಾ.ಪೌಲಾ ರಿಚ್‌ಮನ್‌ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಮಂಗಳವಾರ ‘ರಾಮಾಯಣದ ಮೌಖಿಕ ಕಥನ ಪರಂಪರೆ’ ಎಂಬ ವಿಷಯದ ಕುರಿತು ಸಂಶೋಧಕಿ ಅವರು ಮಾತನಾಡಿದರು.

ಮೌಖಿಕ ಕಥನ ಪರಂಪರೆಯ ರಾಮಾಯಣ ಯಾವ ರೀತಿ ಅರ್ಥಾಂತರಗೊಂಡು ನಮ್ಮ ನಿತ್ಯದ ಸಮಸ್ಯೆಗಳನ್ನು ಮಾನವೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದೆ ಎಂಬುದನ್ನು ಮೂರು ಕಥಾಂತರಗಳ ಮೂಲಕ ವಿವರಿಸಿದ ಅವರು, ಮೌಖಿಕ ಪರಂಪರೆ ರಾಮಾಯಣ ಮುಚ್ಚಿದ ಪುಸ್ತಕವಲ್ಲ, ಬದಲಾಗಿ ಅದು ಮತ್ತೆ ಮತ್ತೆ ಪುನರ್‌ಲೇಖನಗೊಳ್ಳುವ ಪುರಾಣ ಎಂಬುದನ್ನು ಸಾಬೀತುಪಡಿಸಿವೆ ಎಂದರು.

ರಾಮಾಯಣ ಕೇವಲ ಒಂದು ಯುದ್ಧದ ಕಥೆಯಲ್ಲ. ಜೀವನದಲ್ಲಿ ಧುತ್ತೆಂದು ಸಂಕಷ್ಟಗಳು ಎದುರಾದಾಗ, ದುರಂತಗಳು ಸಂಭವಿಸಿದಾಗ ಸ್ತ್ರೀ ಹೇಗೆ ತನ್ನ ಸಾಮರ್ಥ್ಯದ ಮೇಲೆ ಜೀವನವನ್ನು ಮತ್ತೆ ರೂಪಿಸಿಕೊಂಡು ಸಾಫಲ್ಯ ಕಂಡುಕೊಳ್ಳುತ್ತಾಳೆ ಎಂಬ
ಸ್ತ್ರೀ ಸಂವೇದನೆ ವ್ಯಕ್ತವಾಗಿರುವುದು ರಾಮಾಯಣದ ಮೌಖಿಕ ಕಥನ ಪರಂಪರೆಗಳಲ್ಲೇ ಎಂದು ವಿವರಿಸಿದರು.

ಲೇಖಕಿ ಅರ್ಷತಾ ಸತ್ತಾರ್‌ ಮಾತನಾಡಿ, ರಾಮಾಯಣ ಮೇಲ್ನೋಟಕ್ಕೆ ನೀತಿ ಪಾಠ ಹೇಳುವ ಕಥೆ ಅನಿಸಿದರೂ ಮಹಾಭಾರತಕ್ಕಿಂತ ಗಾಢವಾದ ಸಂಕೀರ್ಣತೆಯನ್ನು ಹೊಂದಿರುವ ಪಠ್ಯ. ಮತ್ತೆ ಮತ್ತೆ ಕಾಡುವ, ಸವಾಲು ಎಸೆಯುವ ಜತೆಗೆ ರಾಮಾಯಣ ಸಾಂತ್ವನ ಹೇಳುವ ಒಂದು ಜೀವಂತ ಪಠ್ಯ ಎಂದು ಅಭಿಪ್ರಾಯಪಟ್ಟರು.

ಲೇಖಕಿ ಸಮಿತಾ ಅರಣಿ ಮಾತನಾಡಿ, ಮರೆತು ಹೋಗಬಹುದಾದ ನೆನಪುಗಳನ್ನು ನಮ್ಮ ಸ್ಮೃತಿ ಪಠಲದಲ್ಲಿ ಹಸಿರಾಗಿರುವಂತೆ ಮಾಡಿರುವುದು ರಾಮಾಯಣದ ಮೌಖಿಕ ಕಥನ ಪರಂಪರೆಗಳ ವಿಶೇಷತೆ. ಇದರಿಂದಾಗಿ ರಾಮಾಯಣ ಜಾತಿ, ಭಾಷೆ, ಧರ್ಮ, ಗಡಿಗಳ ರೇಖೆಯನ್ನು ದಾಟಿ ನಿಂತಿದೆ ಎಂದರು.

ಬೆಳಗಿನ ಗೋಷ್ಠಿಯಲ್ಲಿ ಸೋಮವಾರ ಪ್ರದರ್ಶನಗೊಂಡ ‘ಗಾಂಧಿ ವಿರುದ್ಧ ಗಾಂಧಿ’ ನಾಟಕದ ಕುರಿತು ಚರ್ಚೆ ನಡೆಯಿತು.
ಮಧ್ಯಾಹ್ನ ಮಂಜು ಕೊಡಗು ಹಾಗೂ ಗಣೇಶ್‌ ಎಂ. ಕೆ.ವಿ.ಅಕ್ಷರ ನಿರ್ದೇಶನದಲ್ಲಿ ಮಾಸ್ತಿ ಅವರ ಕಥೆ ‘ಆಂಗ್ಲ ನೌಕಾ ಕ್ಯಾಪ್ಟನ್‌’
ಆಧರಿಸಿದ ರಂಗ ಪ್ರಸ್ತುತಿಯನ್ನು ಅಭಿನಯಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.