ADVERTISEMENT

1ರಿಂದ ವನ್ಯಜೀವಿ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:15 IST
Last Updated 15 ಸೆಪ್ಟೆಂಬರ್ 2011, 6:15 IST

ಶಿವಮೊಗ್ಗ: ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಸ್ಥಳೀಯ ಸಂಘ, ಸಂಸ್ಥೆಗಳ ಸಹಯೋಗದಲ್ಲಿ 56ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅ. 1ರಿಂದ 7ರವರೆಗೆ ಜಿಲ್ಲೆಯ ವಿವಿಧೆಡೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ಕುಮಾರ್ ತಿಳಿಸಿದರು.

ನಗರದ ಅರಣ್ಯ ಇಲಾಖೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ  ವನ್ಯಜೀವಿ ಸಪ್ತಾಹ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಸಾಪ್ತಾಹಿಕ ಕಾರ್ಯಕ್ರಮ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವವರನ್ನು ಒಳಗೊಂಡು ರೂಪಿತಗೊಂಡಿವೆ ಎಂದ ಅವರು, ಅ. 1ರ ಬೆಳಿಗ್ಗೆ 9ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಮತ್ತು ಬೈಸಿಕಲ್ ಜಾಥಾ ನಡೆಸಿ ಕುವೆಂಪು ರಂಗಮಂದಿರದಲ್ಲಿ ಸಮಾವೇಶ ಗೊಂಡು ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ನಂತರ ಮಧ್ಯಾಹ್ನ 2.30ಕ್ಕೆ ಕಸ್ತೂರಬಾ ಮಹಿಳಾ ಕಾಲೇಜಿನಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ ನಡೆಯುವುದು ಎಂದರು.

2ರ ಬೆಳಿಗ್ಗೆ 10.30ಕ್ಕೆ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ, 3ರ  ಬೆಳಿಗ್ಗೆ 10.30ಕ್ಕೆ ಕಮಲಾ ನೆಹರೂ ಕಾಲೇಜು ಸಭಾಂಗಣದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಅರಣ್ಯ, ವನ್ಯಜೀವಿ ಹಾಗೂ ಪರಿಸರ ನಿರ್ವಹಣೆ ಕುರಿತು ರಸಪ್ರಶ್ನೆ ಹಾಗೂ ಮ.2.30ಕ್ಕೆ ಮಹಿಳೆಯರಿಗಾಗಿ ವನ್ಯಜೀವಿ ಮತ್ತು ಪರಿಸರ ಎಂಬ ವಿಷಯದ ಕುರಿತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

 4ರ ಬೆಳಿಗ್ಗೆ 10ಕ್ಕೆ  ಕಸ್ತೂರಬಾ ಮಹಿಳಾ ಪಿಯು ಕಾಲೇಜಿನಲ್ಲಿ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ವಿಭಾಗಗಳಲ್ಲಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆ, 7ರಂದು ಸಕ್ರೆಬೈಲಿನ ಆನೆ  ಬಿಡಾರದ ಆವರಣದಲ್ಲಿ ಆನೆಗಳ ದಿನ ಆಚರಿಸಲಾಗುವುದು ಎಂದರು.

ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಜೆ. ರವಿಕುಮಾರ್, ಅರಣ್ಯ ಉಪ ಸಂರಕ್ಷಣಾಧಿಕಾರಿ (ಸಾಮಾಜಿಕ) ವೆಂಕಟೇಶನ್ ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.