ADVERTISEMENT

ಸಂಸದರ ನಿಧಿಯಿಂದ ಜಿಲ್ಲಾಡಳಿತಕ್ಕೆ ₹ 1 ಕೋಟಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 11:54 IST
Last Updated 31 ಮಾರ್ಚ್ 2020, 11:54 IST

ಶಿವಮೊಗ್ಗ: ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಕೈಗೊಳ್ಳುವ ಕಾರ್ಯಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಂಸದರ ನಿಧಿಯಿಂದ ₹ 1 ಕೋಟಿ ಚೆಕ್‌ ಅನ್ನು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ‘ಮಹಾಮಾರಿ ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಿಟ್ಟ ಹೆಜ್ಜೆ ಇಟ್ಟಿದ್ದು, ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದು ಸಕಾಲಿಕವೂ ಆಗಿದೆ’ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಲಾಕ್‍ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಅಸಂಖ್ಯಾತ ಜನರ ಆರೋಗ್ಯ ರಕ್ಷಿಸುವ ಔಷಧ, ಆಹಾರ, ವಸತಿ ಒದಗಿಸುವ ಮಹತ್ವದ ಕಾರ್ಯದಲ್ಲಿ ಸರ್ಕಾರದೊಂದಿಗೆ ಜನಸಾಮಾನ್ಯರು ಮಾನವೀಯ ನೆಲೆಯಲ್ಲಿ ಕೈಜೋಡಿಸುವ ಅಗತ್ಯವಿದೆ ಎಂದರು.

ADVERTISEMENT

ಪ್ರಸ್ತುತ ರೋಗ ಹರಡದಂತೆ ತಡೆಗಟ್ಟಲು ಅಗತ್ಯವಿರುವ ವೆಂಟಿಲೇಟರ್ಸ್‍, ಕಿಟ್‍, ಮಾಸ್ಕ್‌ ಹಾಗೂ ಔಷಧಗಳ ಖರೀದಿಗೆ ಶಿವಮೊಗ್ಗ ಸಂಸದರ ನಿಧಿಯಿಂದ ₹ 1 ಕೋಟಿ ನೀಡಲಾಗಿದೆ. ಕೊರೊನಾ ವೈರಾಣು ಹರಡದಂತೆ ತಡೆಗಟ್ಟುವುದು ಎಲ್ಲರ ಆದ್ಯ ಕರ್ತವ್ಯವಾಗಿದ್ದು, ಮನೆಯಿಂದ ಹೊರಗೆ ಬಾರದೇ ಮನೆಯೊಳಗೇ ಇದ್ದು ಕೊರೊನಾವನ್ನು ಮನೆಗೆ ಬಾರದಂತೆ ತಡೆಗಟ್ಟುವಲ್ಲಿ ಎಲ್ಲರೂ ದೃಢನಿರ್ಣಯ ಕೈಗೊಳ್ಳಬೇಕು’ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.