ADVERTISEMENT

12ರಿಂದ ಶರಣ ಸಾಹಿತ್ಯ, ಭಾವೈಕ್ಯ ಸಮ್ಮೇಳನ

ಸಾಗರ ತಾಲ್ಲೂಕು ಆನಂದಪುರಂ ಸಮೀಪದ ಮುರುಘಾಮಠ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:41 IST
Last Updated 8 ಡಿಸೆಂಬರ್ 2012, 6:41 IST

ಸಾಗರ: ತಾಲ್ಲೂಕಿನ ಆನಂದಪುರಂ ಸಮೀಪದ ಮುರುಘಾಮಠದಲ್ಲಿ ಡಿ. 12, 13ರಂದು ಶರಣ ಸಾಹಿತ್ಯ, ಭಾವೈಕ್ಯ ಸಮ್ಮೇಳನ ಕಂಚಿನ ರಥೋತ್ಸವ, ಶಿವಾನುಭವ ಗೋಷ್ಠಿ, ಹೂವಿನ ಪಲ್ಲಕ್ಕಿ ಉತ್ಸವ, ರಾಜ್ಯಮಟ್ಟದ ಜೂಡೋ ಚಾಂಪಿಯನ್‌ಶಿಪ್, ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.

ಮುರುಘಾಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಈಚೆಗೆ ಸುದ್ದಿಗಾರರೊಂದಿಗೆ ಮಾತನಾಡಿ  ವಿಷಯ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಠದ ಆವರಣದಲ್ಲಿ ಶಿವಪ್ಪನಾಯಕ ವಸ್ತು ಸಂಗ್ರಹಾಲಯ ಸಂಶೋಧನಾ ಪ್ರತಿಷ್ಠಾನ ಆರಂಭಿಸಿರುವ ಇತಿಹಾಸ ವಸ್ತು ಸಂಗ್ರಹಾಲಯ ಉದ್ಘಾಟನೆ ಆಗಲಿದೆ ಎಂದು ವಿವವರಿಸಿದರು.

ಡಿ. 12ರಂದು ಬೆಳಗ್ಗೆ 10.30ಕ್ಕೆ ಜೂಡೋ ಚಾಂಪಿಯನ್‌ಶಿಪ್ ಹಾಗೂ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ  ಸಮಾರಂಭ   ನಡೆಯಲಿದ್ದು,  ಸಂಜೆ 5ಕ್ಕೆ  ಸಮಾರೋಪ  ಸಮಾರಂಭ  ನಡೆಯಲಿದೆ.  ಡಿ. 12 ಮತ್ತು 13ರಂದು  ಮಲೆನಾಡಿನ ವಿಶಿಷ್ಟ ತಿಂಡಿ- ತಿನಿಸುಗಳ ಪ್ರದರ್ಶನ ಮತ್ತು ಮಾರಾಟದ `ಮಲೆನಾಡಿನ ಪಾರಂಪರಿಕ ಆಹಾರ ಮೇಳ' ನಡೆಯಲಿದೆ ಎಂದು ತಿಳಿಸಿದರು.

13ರಂದು ಬೆಳಗ್ಗೆ 10ಕ್ಕೆ ಶರಣ ಸಾಹಿತ್ಯ ಸಮ್ಮೇಳನ ಅರಕಲಗೋಡು ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಾಹಿತಿ, ಸಂಶೋಧಕ ಜಯದೇವಪ್ಪ ಜೈನಕೇರಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 4ಕ್ಕೆ ವಸ್ತು ಸಂಗ್ರಹಾಲಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದರು.

ಅದೇ ದಿನ ಸಂಜೆ 4.30ಕ್ಕೆ ಭಾವೈಕ್ಯ ಸಮ್ಮೇಳನ ನಡೆಯಲಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.

ಅಮ್ರಯ್ಯ ಮಠ ಅವರು ರಚಿಸಿರುವ `ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪ ನಾಯಕ', ಡಾ.ಅ. ಸುಂದರ್ ಅವರ `ಇಕ್ಕೇರಿ ಅಘೋರೇಶ್ವರ' ಕೃತಿಯನ್ನು ಕುವೆಂಪು ವಿವಿ ಕುಲಪತಿ ಪ್ರೊ.ಎಸ್.ಎ. ಬಾರಿ ಬಿಡುಗಡೆ ಮಾಡಲಿದ್ದಾರೆ. ರಾತ್ರಿ 8ಕ್ಕೆ ಕಂಚಿನ ರಥೋತ್ಸವ ಮತ್ತು ಹೂವಿನ ಪಲ್ಲಕ್ಕಿ ಉತ್ಸವ ಏರ್ಪಾಟಾಗಿದ್ದು ಪಟಾಕಿ ಸುಡುಮದ್ದು ಪ್ರದರ್ಶನ ವಿವಿಧ ಜಾನಪದ ಕಲಾ ತಂಡಗಳಿಂದ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದೆ ಎಂದು ಶ್ರೀಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.