ಸಾಗರ: ಪಶ್ಚಿಮಘಟ್ಟ ಕಾರ್ಯಪಡೆ 2010ರಲ್ಲಿ ಜಾರಿಗೆ ತಂದ ಕಾನು ಅರಣ್ಯ ಯೋಜನೆಯಿಂದ 20,000 ಎಕರೆಯಷ್ಟು ಅರಣ್ಯ ಪ್ರದೇಶದ ರಕ್ಷಣೆ ಸಾಧ್ಯವಾಗಿದೆ ಎಂದು ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಹೇಳಿದರು.
ತಾಲ್ಲೂಕಿನ ಹೆಗ್ಗೋಡು-ಸಂಪೆಕೈ ಗ್ರಾಮದಲ್ಲಿ ವೃಕ್ಷಲಕ್ಷ ಆಂದೋಲನ ಬುಧವಾರ ಏರ್ಪಡಿಸಿದ್ದ ಸುಸ್ಥಿರ ಅಭಿವೃದ್ಧಿ ಕುರಿತ ಜಾಗೃತಿ ಅಭಿಯಾನ ವೃಕ್ಷಾರೋಪಣ, ಪ್ರಕೃತಿ ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಯೋಜನೆಗಳನ್ನು ರೂಪಿಸಬೇಕು. ಅದನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿಯೂ ಇರಬೇಕು. ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಪಡೆಯಿಂದ ಈ ನಿಟ್ಟಿನಲ್ಲಿ ಸಕಾರಾತ್ಮಕ ಕೆಲಸಗಳು ನಡೆದಿವೆ. ಅರಣ್ಯ ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಬೆಟ್ಟ, ಕಾನು ಸಂರಕ್ಷಣೆ ಅಭಿಯಾನ ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗ್ರಾಮ ಅರಣ್ಯ ಸಮಿತಿಯ ಸಹಕಾರದೊಂದಿಗೆ ನಡೆಯುತ್ತಿದೆ. ಈ ಮೂಲಕ ಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ಮನದಟ್ಟು ಮಾಡಲು ಒತ್ತು ನೀಡಲಾಗುತ್ತಿದೆ ಎಂದು ವೃಕ್ಷಲಕ್ಷ ಆಂದೋಲನ ಸಂಸ್ಥೆಯ ಅನಂತ ಹೆಗಡೆ ಅಶೀಸರ ತಿಳಿಸಿದರು.
ಪರಿಸರದಲ್ಲಿನ ಜೀವ ವೈವಿಧ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಮೂಲಕ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ಪರಿಸರ ತಜ್ಞ ಆನೆಗುಳಿ ಸುಬ್ರಾವ್ ಹೇಳಿದರು.
ಪ್ರಮುಖರಾದ ಕೇಶವ ಸಂಪೆಕೈ, ಬಿ.ಎಚ್.ರಾಘವೇಂದ್ರ, ಶ್ರೀಪಾದ ಬಿಚ್ಚುಗತ್ತಿ, ಕವಲಕೋಡು ವೆಂಕಟೇಶ್, ಎಂ.ಜಿ.ರಾಮಚಂದ್ರ, ರಂಗನಾಥ್, ಅಣ್ಣಪ್ಪ, ಶ್ರೀಕಂಠ ಗೌಡ, ಗಣಪತಿ ಬಿಸಲಕೊಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.