ADVERTISEMENT

ಶರಾವತಿ ಹಿನ್ನೀರಿನಲ್ಲಿ 2.5 ಕಿ.ಮೀ. ಈಜಿದ ಬಾಲೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 18:48 IST
Last Updated 25 ಏಪ್ರಿಲ್ 2019, 18:48 IST
‘ಹೊಳೆಬಾಗಿಲು ಜಲಯಾನ’ದಲ್ಲಿ ಭಾಗವಹಿಸಿದ್ದ ಸಾಗರದ ಜಲಯೋಗ ಸಾಗರ ಹಾಗೂ ಹಕ್ಕಲಳ್ಳಿ ಹೆರಿಟೇಜ್ ಹೋಮ್ಸ್ ನಂದಿಗೋಡು ಮಿತ್ರ ತಂಡ
‘ಹೊಳೆಬಾಗಿಲು ಜಲಯಾನ’ದಲ್ಲಿ ಭಾಗವಹಿಸಿದ್ದ ಸಾಗರದ ಜಲಯೋಗ ಸಾಗರ ಹಾಗೂ ಹಕ್ಕಲಳ್ಳಿ ಹೆರಿಟೇಜ್ ಹೋಮ್ಸ್ ನಂದಿಗೋಡು ಮಿತ್ರ ತಂಡ   

ಸಾಗರ: ಮಾರ್ಚ್ 24ರಂದು ಹಿನ್ನೀರಿನಲ್ಲಿ 1 ಕಿ.ಮೀ. ದೂರ ಈಜುವ ಮೂಲಕ ಸುದ್ದಿ ಮಾಡಿದ್ದ ತಾಲ್ಲೂಕಿನ ಕಿಪ್ಪಡಿ ಗ್ರಾಮದ 3 ವರ್ಷ 9 ತಿಂಗಳ ಬಾಲೆ ಮಿಥಿಲಾ ಈಗ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾಳೆ.

ಜಲಯೋಗ ಸಾಗರ ಹಾಗೂ ಹಕ್ಕಲಳ್ಳಿ ಹೆರಿಟೇಜ್ ಹೋಮ್ಸ್ ನಂದಿಗೋಡು ಮಿತ್ರರು ಏರ್ಪಡಿಸಿದ್ದ ‘ಹೊಳೆಬಾಗಿಲು ಜಲಯಾನ’ ಕಾರ್ಯಕ್ರಮದಲ್ಲಿ ಅಂಬಾರಗೋಡ್ಲು ದಡದಿಂದ ಕಳಸವಳ್ಳಿ ದಡದವರೆಗೆ ಶರಾವತಿ ಹಿನ್ನೀರಿನಲ್ಲಿ 2.5 ಕಿ.ಮೀ. ದೂರ ಈಜುವ ಮೂಲಕ ಮಿಥಿಲಾ ಸಾಹಸ ಮೆರೆದಿದ್ದಾಳೆ.

ಕಿಪ್ಪಡಿ ಗ್ರಾಮದ ಗಿರೀಶ್, ವಿನುತಾ ಅವರ ಪುತ್ರಿಯಾಗಿರುವ ಮಿಥಿಲಾಗೆ 2 ವರ್ಷ 6 ತಿಂಗಳು ಇರುವಾಗಲೇ ಈಜು ತರಬೇತಿ ಕಲಿಸಿದ ಶ್ರೇಯಸ್ಸು ಜಲಯೋಗ ಸಂಸ್ಥೆಯ ಹರೀಶ್ ನವಾಥೆ ಅವರದ್ದು. ಮುಂದಿನ ದಿನಗಳಲ್ಲಿ ಪ್ರಸನ್ನ, ವಿನಯ, ಕೌಶಿಕ್, ಸುನೀಲ್ ಹಾಗೂ ತಂದೆ ಗಿರೀಶ್‌ ಅವರಿಂದ ತರಬೇತಿ ಪಡೆದ ಮಿಥಿಲಾ ತನ್ನ ಮೂರನೇ ವರ್ಷಕ್ಕೆ ಈಜಲು ಆರಂಭಿಸಿದ್ದಳು.

ADVERTISEMENT

26 ಜನರ ತಂಡದೊಂದಿಗೆ ಹಿನ್ನೀರಿನಲ್ಲಿ ಈಜಲು ಆರಂಭಿಸಿದ ಮಿಥಿಲಾ 2.5 ಕಿ.ಮೀ. ದೂರವನ್ನು 1 ಗಂಟೆ 55 ನಿಮಿಷ ಅವಧಿಯಲ್ಲಿ ಸತತವಾಗಿ ಈಜುವ ಮೂಲಕ ಕ್ರಮಿಸಿದ್ದಾಳೆ.

‘ನೀರಿನಲ್ಲೇ ಯೋಗ ಮಾಡುವ ಮೂಲಕ ವಿಶ್ರಾಂತಿ ಪಡೆಯುವ ಕಲೆ ಮಿಥಿಲಾಳಿಗೆ ಕರಗತವಾಗಿದೆ. ಆದರೆ ಈ ಬಾರಿ 2.5 ಕಿ.ಮೀ. ದೂರವನ್ನು ಕ್ರಮಿಸುವಾಗ ಅವಳು ಜಲಯೋಗಕ್ಕೆ ಮೊರೆಹೋಗದೆ ಸತತವಾಗಿ ಈಜಿ ಗುರಿ ಮುಟ್ಟಿರುವುದು ವಿಶಿಷ್ಟ ಸಾಧನೆಯಾಗಿದೆ’ ಎನ್ನುತ್ತಾರೆ ತರಬೇತುದಾರ ಹರೀಶ್ ನವಾಥೆ.

ಶರಾವತಿ ಹಿನ್ನೀರು ಸೇರಿ ಎಲ್ಲಾ ಜಲಮೂಲಗಳಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ‘ಹೊಳೆಬಾಗಿಲು ಜಲಯಾನ’ಕ್ಕೆ ಚಾಲನೆ ನೀಡಲಾಯಿತು. ಈ ಜಲಯಾನದಲ್ಲಿ 67 ವರ್ಷದ ವೃದ್ಧರೂ ಭಾಗವಹಿಸಿದ್ದರು.

ಜಲಯೋಗ ತಜ್ಞ ಹರೀಶ್ ನವಾಥೆ ಅವರೊಂದಿಗೆ ಪತ್ನಿ ಉಷಾ ನವಾಥೆ, ಪುತ್ರ ಆದಿತ್ಯ ನವಾಥೆ ಹೀಗೆ ಒಂದು ಕುಟುಂಬವೇ ಹಿನ್ನೀರಿನಲ್ಲಿ 2.5 ಕಿ.ಮೀ. ದೂರ ಈಜಿದ್ದು ಕೂಡ ಗಮನಾರ್ಹ.

ತಾಲ್ಲೂಕಿನ ಮತ್ತಿಕೊಪ್ಪ ಗ್ರಾಮದ ಜಗದೀಶ ಗೌಡರ ಪುತ್ರಿ 6 ವರ್ಷದ ಶ್ರೇಯಾ, 3ವರ್ಷ 4 ತಿಂಗಳಿನ ಶರಧಿ, ಸುರಕ್ಷಾ ಸಾಮಗ್ರಿಗಳೊಂದಿಗೆ ಜಲಯಾನದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಈಜಿದ್ದಾರೆ.

ಹಕ್ಕಲಳ್ಳಿ ಹೆರಿಟೇಜ್ ಹೋಮ್‌ನ ಎನ್.ಸಿ. ಗಂಗಾಧರ್ ನಂದಿಗೋಡು, ಸಾಮಾಜಿಕ ಕಾರ್ಯಕರ್ತ ಕುಂಟ
ಗೋಡು ಸೀತಾರಾಮ್, ಈಜುಗಾರರಿಗೆ ರಕ್ಷಕರಾಗಿ ಹಾಜರಿದ್ದ ಪ್ರಸನ್ನ, ವಿನಯ, ಆದಿತ್ಯ, ಕೌಶಿಕ್, ಸುನೀಲ, ಕಿರಣ, ಗಂಗಾಧರ ಸಹಕಾರ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.