ADVERTISEMENT

26ರಿಂದ ತೋಟಗಾರಿಕೆ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 6:45 IST
Last Updated 25 ಜನವರಿ 2012, 6:45 IST

ಶಿವಮೊಗ್ಗ: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯ್ತಿ, ಆತ್ಮ ಯೋಜನೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘ ಸಂಯುಕ್ತ ಆಶ್ರಯದಲ್ಲಿ ಜ.26ರಿಂದ 29ರವರೆಗೆ ನಗರದ ಮಹಾತ್ಮಗಾಂಧಿ ಪಾರ್ಕ್‌ನಲ್ಲಿ ತೋಟಗಾರಿಕೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು `ವಿಶ್ವ ಶಾಂತಿಗಾಗಿ ಫಲ ಪುಷ್ಪ ಪ್ರದರ್ಶನ~ ಎಂಬ ಘೋಷಣೆಯಡಿ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಸಂಜಯ ಬಿಜ್ಜೂರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ಜಾತಿ ಹೂವುಗಳು, ಹಣ್ಣು ತರಕಾರಿಗಳಿಂದ ತಯಾರಿಸಿದ ಕಲಾತ್ಮಕ ಕೆತ್ತನೆಗಳು, ಬೊನ್ಸಾಯ್‌ಗಳು, ಹೂವುಗಳ ಕಲಾತ್ಮಕ ಜೋಡಣೆಗಳು, ರಂಗೋಲಿ ಹಾಗೂ ವಿವಿಧ ತರಕಾರಿ ಹಾಗೂ ಪ್ಲಾಂಟೇಷನ್ ಬೆಳೆಗಳ ಜೀವ ವೈವಿಧ್ಯತೆಯನ್ನು ರೈತರಿಂದ ಸಂಗ್ರಹಿಸಿ ಒಂದೇ ಸೂರಿನಡಿ ಪ್ರದರ್ಶನಕ್ಕೆ ಇಡಲಾಗುವುದು ಎಂದರು.

ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳನ್ನು  ಪರಿಚಯಿಸುವ ಮಳಿಗೆಗಳು, ವಿವಿಧ ಬಗೆಯ ಯಂತ್ರೋಪಕರಣ, ರಸಗೊಬ್ಬರ, ಕೀಟನಾಶಕ, ತುಂತುರು ನೀರಾವರಿ ವ್ಯವಸಾಯ ಮಾಹಿತಿಗಳು, ಬ್ಯಾಂಕ್ ಸಾಲ-ಸೌಲಭ್ಯಗಳ ಮಾಹಿತಿಗಳಲ್ಲದೆ ಅಲಂಕಾರಿಕ ಕುಂಡಗಳು, ಹೂವುಗಳ ಹಾಗೂ ಸಸಿಗಳ ಮಾರಾಟ ಮಳಿಗೆಯನ್ನು ತೆರೆಯಲಾಗುವುದು. ಜಿಲ್ಲೆಯ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳು, ವಿವಿಧ ಕರಕುಶಲ ಸಾಮಗ್ರಿಗಳು, ಆಟಿಕೆಗಳ ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಜ.26ರಂದು ಮಧ್ಯಾಹ್ನ 3.30ಕ್ಕೆ ಪ್ರದರ್ಶನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ಶಾಸಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ತೋಟಗಾರಿಕೆ ಸಂಬಂಧಿತ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡುವರು ಹಾಗೂ ವಿವಿಧ ಇಲಾಖೆ ಯೋಜನೆಗಳ ಮಾಹಿತಿ ನೀಡುವ ಮಳಿಗೆ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ನೆರವೇರಿಸುವರು ಎಂದರು.

ಜ. 26ರಂದು ಬೆಳಿಗ್ಗೆ 10ಕ್ಕೆ ಹೂವು, ತರಕಾರಿ, ಧಾನ್ಯ, ಬಣ್ಣಗಳ ಮಿಶ್ರಣದೊಂದಿಗೆ ರಂಗೋಲಿ ಸ್ಪರ್ಧೆ ನಡೆಸಲಾಗುವುದು. ಜ.28ರಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ `ಪಶ್ಚಿಮ ಘಟ್ಟದ ಆರ್ಕಿಡ್ ಪುಷ್ಪ ಬೇಸಾಯದ ಹಾಗೂ ಇಕೆಬೆನ (ಹೂವು ಜೋಡಣೆ)~ ಬಗ್ಗೆ ಕಾರ್ಯಾಗಾರ ಸಹ ನಡೆಸಲಾಗುವುದು ಎಂದರು.

ಸ್ವ ಉದ್ಯೋಗ, ಮಾಹಿತಿ ಮತ್ತು ಮನೋರಂಜನೆ ಒದಗಿಸಲಿರುವ ಈ ಫಲ-ಪುಷ್ಪ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ 5 ಹಾಗೂ ವಿದ್ಯಾರ್ಥಿಗಳಿಗೆ ರೂ 1 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಉಪ ನಿರ್ದೇಶಕ ಡಾ.ಎಂ.ವಿಶ್ವನಾಥ್, ಜಿಲ್ಲಾ ಉದ್ಯಾನ ಕಲಾ ಸಂಘದ ಮಾಜಿ ಅಧ್ಯಕ್ಷ ಕಡಿದಾಳ್ ಗೋಪಾಲ್, ಖಜಾಂಚಿ ಲೋಕೇಶ್ವರಿ ಚೋಳ್ಕೆ,  ಎಸ್.ಬಿ. ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.