ADVERTISEMENT

ತ್ಯಾವರೆಕೊಪ್ಪ: ನಾಲ್ಕು ಕತ್ತೆ ಕಿರುಬ ಆಗಮನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 16:04 IST
Last Updated 28 ಫೆಬ್ರುವರಿ 2024, 16:04 IST
ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಲ್ಲಿ ಸೆರೆಯಲ್ಲಿರುವ ಸಲಗ
ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಲ್ಲಿ ಸೆರೆಯಲ್ಲಿರುವ ಸಲಗ   

ಶಿವಮೊಗ್ಗ: ನಿಸರ್ಗದ ಜಾಡಮಾಲಿ ಎಂದೇ ಜನಜನಿತವಾಗಿರುವ ಕತ್ತೆ ಕಿರುಬಗಳು (Hyna) ಇಲ್ಲಿನ ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ನೂತನ ಅತಿಥಿಗಳಾಗಿವೆ. ಶುಕ್ರವಾರದಿಂದ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿವೆ.

ಮೈಸೂರು ಮೃಗಾಲಯದಿಂದ ಒಂದು ಗಂಡು, ಮೂರು ಹೆಣ್ಣು ಸೇರಿದಂತೆ ನಾಲ್ಕು ಕತ್ತೆ ಕಿರುಬಗಳನ್ನು ಬುಧವಾರ ರಾತ್ರಿ ಶಿವಮೊಗ್ಗಕ್ಕೆ ಕರೆತರಲಾಯಿತು. ವನ್ಯಜೀವಿ ವೈದ್ಯ ಡಾ.ಮುರಳಿಮನೋಹರ್ ನೇತೃತ್ವದ ತಂಡ ಈ ಕತ್ತೆ ಕಿರುಬಗಳನ್ನು ಮೃಗಾಲಯಕ್ಕೆ ಕರೆತಂದಿತು.

ಈ ಮೊದಲು ಹುಲಿ–ಸಿಂಹಧಾಮದಲ್ಲಿ ಜೋಡಿ ಕತ್ತೆ ಕಿರುಬ ಇದ್ದವು. ಅದರಲ್ಲಿ ಗಂಡು ಸಾವಿಗೀಡಾಗಿದೆ. ಹೆಣ್ಣು ಮಾತ್ರ ಇದೆ. ಇದರಿಂದ ಅವುಗಳ ವಂಶಾಭಿವೃದ್ಧಿಗೆ ತೊಂದರೆ ಆಗಿತ್ತು.

ADVERTISEMENT

‘ಪ್ರಾಣಿಗಳ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯದಿಂದ ಈ ನಾಲ್ಕು ಕತ್ತೆಕಿರುಬಗಳನ್ನು ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಗಜರಾಜ ಕ್ಯಾಂಪಿನಲ್ಲೇ ದೈತ್ಯದೇಹಿ!

ಹಾಸನ ಜಿಲ್ಲೆ ಆಲ್ದೂರು ಬಳಿ ಮೂರು ತಿಂಗಳ ಹಿಂದೆ ಕಾಫಿ ತೋಟದಲ್ಲಿ ಸೆರೆಹಿಡಿದ ಸಲಗ ಈಗ ಸಕ್ರೆಬೈಲು ಕ್ಯಾಂಪಿನಲ್ಲಿರುವ ಗಜಪಡೆಯಲ್ಲೇ ದೈತ್ಯದೇಹಿ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಈ ಸಲಗನ ಸೇರ್ಪಡೆಯಿಂದ ಸದ್ಯ ಕ್ಯಾಂಪಿನಲ್ಲಿರುವ ಆನೆಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಅದರಲ್ಲಿ ನಾಲ್ಕು ಹೆಣ್ಣಾನೆ ಇವೆ.

ತಪ್ಪು ಗ್ರಹಿಕೆಯಿಂದ ಸೆರೆ: ಆಲ್ದೂರು ಭಾಗದಲ್ಲಿ ಜನರು ಹಾಗೂ ಬೆಳೆಗಳ ಮೇಲೆ ಬೇರೊಂದು ಆನೆ ದಾಳಿ ಮಾಡುತ್ತಿತ್ತು. ಜನರಿಗೆ ಉಪಟಳ ಕೊಡುತ್ತಿದ್ದ ಆ ಆನೆಯನ್ನು ಹುಡುಕಿಕೊಂಡು ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ಗ್ರಹಿಕೆಯಿಂದ ಈ ಸಲಗವನ್ನು ಹಿಡಿದಿದ್ದರು ಎಂದು ತಿಳಿದುಬಂದಿದೆ. ಸೆರೆ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ 30 ವರ್ಷದ ಈ ಆನೆಗೆ ಇಲ್ಲಿ ಚಿಕಿತ್ಸೆ ಕೂಡ ನೀಡಲಾಗಿದೆ. ತಲಾ ನಾಲ್ಕೂವರೆ ಅಡಿ ಉದ್ದದ ದಂತಗಳನ್ನು ಹೊಂದಿರುವ ಈ ಆನೆಯನ್ನು ಸಕ್ರೆಬೈಲು ಕ್ಯಾಂಪಿನಲ್ಲಿ ಪಳಗಿಸುವ ಕಾರ್ಯ ಡಾ.ವಿನಯ್ ನೇತೃತ್ವದಲ್ಲಿ ನಡೆದಿದೆ. ಶೀಘ್ರ ಈ ಆನೆಗೂ ಹೆಸರು ಇಡುವ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಹೊನ್ನಾಳಿ ಬಳಿ ಅರೆವಳಿಕೆ ಮದ್ದು ನೀಡುವಾಗ ಡಾ.ವಿನಯ್ ಮೇಲೆ ದಾಳಿ ನಡೆಸಿದ್ದ ಆನೆ ‘ಅಭಿಮನ್ಯು’ ಈಗ ಸಕ್ರೆಬೈಲು ಕ್ಯಾಂಪಿನಲ್ಲಿ ಪ್ರವಾಸಿಗರ ನೆಚ್ಚಿನ ಆನೆ. ಪಳಗಿದ ನಂತರ ಜನಸ್ನೇಹಿಯಾಗಿ ಈ ಆನೆ ಬದಲಾಗಿದೆ. ಸವಾರಿ ವೇಳೆ ಜನರ ಹೊತ್ತು ಸಾಗುವಾಗ ವಿಧೇಯದಿಂದ ವರ್ತಿಸುವ ಅಭಿಮನ್ಯು ಅಲ್ಲಿನ ಕಾವಾಡಿ ಮಾವುತರ ನೆಚ್ಚಿನ ಆನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.