ADVERTISEMENT

ಹೊಸನಗರ: ಚಕ್ರಾ ವ್ಯಾಪ್ತಿಯಲ್ಲಿ 40.1 ಸೆಂ.ಮೀ. ಮಳೆ

ಜಲಾಶಯಕ್ಕೆ ಹೆಚ್ಚಿನ ನೀರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 4:20 IST
Last Updated 25 ಜುಲೈ 2021, 4:20 IST
ಚಕ್ರಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವ ನೋಟ
ಚಕ್ರಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವ ನೋಟ   

ಹೊಸನಗರ: ತಾಲ್ಲೂಕಿನ ನಗರ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ಆಗುತ್ತಿದೆ. ಅದರಲ್ಲೂ ಇಲ್ಲಿನ ಚಕ್ರಾನಗರ ಸುತ್ತಮುತ್ತ 40.1 ಸೆಂ.ಮೀ. ದಾಖಲೆಯ ಮಳೆ ಆಗಿದೆ.

ಶನಿವಾರ ಬೆಳಿಗ್ಗೆ 8ರ ಹೊತ್ತಿಗೆ 24 ಗಂಟೆಗಳಲ್ಲಿ 40.1 ಸೆಂ.ಮೀ. ಮಳೆ ಬಿದ್ದಿದೆ.

ಈವರೆಗೂ ಮಳೆಗಾಲದ ದಿನಗಳಲ್ಲಿ 32 ಸೆಂ.ಮೀ ಮಳೆ ಬಿದ್ದು, ಅದೇ ದಾಖಲೆಯಾಗಿತ್ತು. ಹಲವಾರು ವರ್ಷಗಳಿಂದ ನಗರ ಹೋಬಳಿ ಮಾಣಿ, ಸಾವೇಹಕ್ಕಲು, ಚಕ್ರಾ ಜಲಾಶಯ ಸುತ್ತಮುತ್ತ ಭಾರಿ ಪ್ರಮಾಣದ ಮಳೆ ಬೀಳುತ್ತಿದೆ. 10 ಸೆಂ.ಮೀನಿಂದ 35. ಸೆಂ.ಮೀ. ಮಳೆ ಆಗುವುದು ಇಲ್ಲಿ ಸಾಮಾನ್ಯ ಆಗಿದೆ. ಈ ಭಾಗದಲ್ಲಿ ಮಳೆಗಾಲದಲ್ಲಿ ಪ್ರತಿವರ್ಷ 8 ಸಾವಿರ ಮಿ.ಮೀ.ಗೂ ಹೆಚ್ಚು ಮಳೆ ಆಗುತ್ತಿದ್ದು, ಆಗುಂಬೆಗಿಂತ ಹೆಚ್ಚು ಮಳೆ ಸುರಿಯುತ್ತಿದೆ.

ADVERTISEMENT

ಜಲಾಶಯಕ್ಕೆ ಹೆಚ್ಚಿನ ನೀರು: ಇಲ್ಲಿನ ಮಾಣಿ ಜಲಾಶಯಕ್ಕೆ 8743 ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯದಲ್ಲಿ 580 ಮೀಟರ್ ನೀರು ತಲುಪಿದೆ. ಚಕ್ರಾ ಜಲಾಶಯಕ್ಕೆ 4622 ಕ್ಯುಸೆಕ್ ಹಾಗೂ ಸಾವೇಹಕ್ಕಲು ಜಲಾಶಯಕ್ಕೆ 4743 ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಚಕ್ರಾ, ಸಾವೇಹಕ್ಕಲು ಭರ್ತಿ ಆಗುವ ಹಂತ ತಲುಪಿದ್ದು, ಹೆಚ್ಚಿನ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಲಿಂಗನಮಕ್ಕಿ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹ ಆಗುತ್ತಿದೆ.

ಮಳೆ: ಸಾವೇಹಕ್ಕಲು–30.8 ಸೆಂ.ಮೀ., ನಗರ–23.4 ಸೆಂ.ಮೀ, ಮಾಸ್ತಿಕಟ್ಟೆ– 21.5 ಸೆಂ.ಮೀ., ಹೊಸನಗರ–17.5 ಸೆಂ.ಮೀ., ಯಡೂರು–16.5 ಸೆಂ.ಮೀ., ಮಾಣಿ 13.5 ಸೆಂ.ಮೀ., ಹುಲಿಕಲ್ 12.2 ಸೆಂ.ಮೀ., ಹುಂಚಾ 6 ಸೆಂ.ಮೀ., ರಿಪ್ಪನ್‌ಪೇಟೆ–4.9 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.