ADVERTISEMENT

ಪ್ರತಿಭೆಗೆ ಜಾತಿ, ಕುಲ, ಧರ್ಮ ಪರಿಗಣಿಸಬೇಡಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 5:49 IST
Last Updated 8 ಜನವರಿ 2018, 5:49 IST

ಸೊರಬ: ಪ್ರತಿಭೆಗೆ ಜಾತಿ, ಕುಲ, ಧರ್ಮವನ್ನು ಪರಿಗಣಿಸದೆ ಅವಕಾಶಗಳನ್ನು ನೀಡುವಂತಹ ವ್ಯವಸ್ಥೆಯ ಅಗತ್ಯವಿದೆ ಎಂದು ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಡಾ. ಎಚ್.ರವಿ ಕುಮಾರ್ ಹೇಳಿದರು.

ತಾಲ್ಲೂಕಿನ ಕರಡಿಗೆರೆ ಗ್ರಾಮದ ಮಡಿವಾಳರ ಸಮುದಾಯ ಭವನದ ಆವರಣದಲ್ಲಿ ತಾಲ್ಲೂಕು ಮಾಚಿದೇವ ಮಡಿವಾಳ ಸಂಘ ಹಾಗೂ ಎಸ್.ಎಂ.ಎಂ.ಇ.ಸಿ.ಟ್ರಸ್ಟ್ ಭಾನುವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಡಿವಾಳ ಸಮಾಜದಲ್ಲಿ ಪ್ರತಿಭಾನ್ವಿತರಿದ್ದು, ಜಾತಿಯ ಕೀಳರಿಮೆಯನ್ನು ತೊರೆದು ಅವಕಾಶಗಳನ್ನು ಪಡೆಯಬೇಕು. ಬಸವಣ್ಣನ ಕಾಲದಲ್ಲಿ ಕಾಯಕದ ಮೂಲಕ ಮಡಿವಾಳ ಸಮಾಜ ಗುರುತಿಸಿಕೊಂಡಿದೆ. ಪ್ರತಿಯೊಂದು ವೃತ್ತಿಯೂ ಮಹತ್ವದ್ದಾಗಿದ್ದು, ಸಂಕೋಚಗಳನ್ನಿಟ್ಟುಕೊಳ್ಳದೆ ಶ್ರದ್ಧೆಯಿಂದ ನೆರವೇರಿಸಿದಾಗ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.

ADVERTISEMENT

ಅವಕಾಶ ವಂಚಿತ ಸಮಾಜವಾಗಿ ಮಡಿವಾಳ ಸಮಾಜ ಗುರುತಿಸಿಕೊಳ್ಳುತ್ತಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿತುಕೊಂಡು ಸಂಘಟನೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದ ಅವರು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಸಾಧಕ ಮಹಿಳೆಯರನ್ನು ಪ್ರೋತ್ಸಾಹಿಸುತ್ತಿರುವುದು ಸಮಾಜದ ಬಲವರ್ಧನೆಯ ಮುನ್ನುಡಿಯಾಗಿದೆ ಎಂದರು.

ಮೂಡಬಿದ್ರೆ ಕರಿಂಜೆ ಮಠದ ಶ್ರೀ ಮುಕ್ತಾನಂದ ಮಹಾಸ್ವಾಮಿ ಮಾತನಾಡಿ, ಭಾರತೀಯರ ಜೀವಾಳ ಆಧ್ಯಾತ್ಮವಾಗಿದೆ. ಸೊರಬ ತಾಲ್ಲೂಕಿನಲ್ಲಿ 8 ಲಿಂಗಾಯತರ ಮಠಗಳಿದ್ದು, 12 ನೇ ಶತಮಾನದ ಪ್ರಮುಖ ವಚನಕಾರ ಮಡಿವಾಳ ಮಾಚಿದೇವರ ಗುರುಪೀಠ ನಿರ್ಮಿಸುವ ಚಿಂತನೆ ಮಾಡಬೇಕು ಎಂದರು.

‘ಮನಸ್ಸಿನ ಗುಲಾಮನಾಗದೆ ನಮ್ಮ ಗುಲಾಮನನ್ನಾಗಿ ಮನಸನ್ನು ಮಾಡಿಕೊಂಡಾಗ ಯಶಸ್ಸು ಸುಲಭವಾಗಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮನಃಪೂರ್ವಕವಾಗಿ ಸಮಾಜ ಸಂಘಟನೆಯಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು. ರಾಜು ಎಂ. ತಲ್ಲೂರು ಅವರು ತಾಲ್ಲೂಕಿನಲ್ಲಿ ಕೋಟ್ಯಂತರ ಹಣ ತೊಡಗಿಸಿ ಜನಪರ ಕೆಲಸ ಮಾಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ
ಪಕ್ಷಗಳು ಟಿಕೆಟ್ ನೀಡದೆ ಸ್ವತಂತ್ರ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದರೂ ಸಮಾಜದವರು ಬೆಂಬಲ ನೀಡಬೇಕು. ಮಡಿವಾಳ ಸಮಾಜದವರು ರಾಜಕೀಯ ಪ್ರವೇಶಿಸುವ ತುರ್ತು ಇದೆ. ಈ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸರ್ಕಾರ ಮುಂದಾಗಬೇಕು ಎಂದರು.

ಸಂಘದ ಅಧ್ಯಕ್ಷ ರಾಜು.ಎಂ.ತಲ್ಲೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪ್ರತಿಭಾ ಪುಸ್ಕಾರಗಳನ್ನು ಪಡೆದ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡುವುದರ ಜತೆಗೆ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು’ ಎಂದು ಹೇಳಿದರ ಅವರು ‘ಯಾವುದೇ ಪಕ್ಷಗಳು ಟಿಕೆಟ್ ನೀಡದಿದ್ದರೂ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ. ಸಮಾಜದ ಜನತೆಯ ಸಹಕಾರ ಮುಖ್ಯ’ ಎಂದರು.

ಚಿತ್ರದುರ್ಗ ಶ್ರೀ ಮಾಚಿದೇವ ಮಹಾ ಸಂಸ್ಥಾನದ ಬಸವ ಮಾಚಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿರಾವರಿ ಇಲಾಖೆ ಕಾರ್ಯದರ್ಶಿ ಬಿ.ಜಿ.ಗುರುಪಾದ ಸ್ವಾಮಿ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ನಾಗರಾಜ್ ಚಂದ್ರಗುತ್ತಿ, ಜ್ಯೋತಿ ನಾರಾಯಣಪ್ಪ, ಗುಡ್ಡಪ್ಪ, ಈಶ್ವರಪ್ಪ ಚೆನ್ನಪಟ್ಟಣ, ಮಲ್ಲಪ್ಪ, ಮುತ್ತೇಶ್, ಬಂಗಾರಪ್ಪ, ಹುಚ್ಚರಾಯಪ್ಪ, ಸಿ.ಪಿ.ತುಳಜಪ್ಪ, ಎನ್.ಗಣಪತಿ, ಅಶೋಕ್, ಲೀಕಪ್ಪ ಇದ್ದರು.

ಹರ್ಷಿತಾ ಮತ್ತು ವರ್ಷಿತಾ ಪ್ರಾರ್ಥಿಸಿದರು. ಉಮೇಶ್ ಸ್ವಾಗತಿಸಿ, ಹಿರಣ್ಯಪ್ಪ ಕುಂಬ್ರಿ ನಿರೂಪಿಸಿದರು. ಎಂ.ಎ ರಾಜ್ಯ ಶಾಸ್ತ್ರ ವಿಭಾಗದಲ್ಲಿ 6ನೇ ರ‍್ಯಾಂಕ್ ಪಡೆದ ಶ್ರುತಿ ಎಚ್. ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.