ADVERTISEMENT

‘ಯುವ ಸಮುದಾಯ ದೇಶದ ಆಸ್ತಿಯಾಗಲಿ’

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 12:46 IST
Last Updated 15 ಜನವರಿ 2018, 12:46 IST

ಶಿಕಾರಿಪುರ: ಯುವ ಸಮುದಾಯ ದೇಶದ ಆಸ್ತಿಯಾಗಬೇಕು ಎಂದು ಜೀವ ವಿಮಾ ನಿಗಮ ಅಭಿವೃದ್ಧಿ ಅಧಿಕಾರಿ ಸತ್ಯನಾರಾಯಣ ರಾವ್‌ ಸಲಹೆ ನೀಡಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿವಸ್‌ ಪ್ರಯುಕ್ತ ಎಬಿವಿಪಿ ಆಶ್ರಯದಲ್ಲಿ ನಡೆದ ಯುವ ಸ್ಪಂದನ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ವಿಷಯ ಕುರಿತು ಅವರು ಮಾತನಾಡಿದರು.

‘ದೇಶವನ್ನು ಬೆಳೆಸುವ ನಿಟ್ಟಿನಲ್ಲಿ ಯುವ ಸಮುದಾಯ ಪಾತ್ರ ಮುಖ್ಯವಾಗಿದೆ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಸಾಧನೆ ಮಾಡುವ ಗುರಿಯನ್ನು ಯುವ ಪೀಳಿಗೆ ಇಟ್ಟುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೂಲಕ ಉನ್ನತ ಹುದ್ದೆಗಳನ್ನು ಪಡೆಯಬೇಕು. ಉತ್ತಮ ನಾಗರಿಕರಾಗುವ ಮೂಲಕ ದೇಶಕ್ಕೆ ಸದ್ಬಳಕೆ ಆಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಬೆಣ್ಣೆ ಪ್ರವೀಣ್‌ ಮಾತನಾಡಿ, ‘ಹಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಎಬಿವಿಪಿ ನ್ಯಾಯ ದೊರಕಿಸಲು ಹೋರಾಟ ನಡೆಸಿದೆ. ಹೋರಾಟಕ್ಕೆ ಮಾತ್ರ ಸೀಮಿತವಾಗದೇ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ’ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಶಿವಮೊಗ್ಗ ಸ್ಪರ್ಧಾ ಕರ್ನಾಟಕ ಕೋಚಿಂಗ್‌ ಸೆಂಟರ್‌ ಅಧ್ಯಕ್ಷ ಮೋಹನ್‌ ಕುಮಾರ್ ಹಾಗೂ ಸಾಧನಾ ಅಕಾಡೆಮಿ ಸಂಸ್ಥಾಪಕ ಎಂ.ಬಿ. ಮಂಜುನಾಥ್‌ ಮಾತನಾಡಿದರು.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಬಿ.ಆರ್. ಹನುಮಂತಪ್ಪ, ಕೆ.ಎಚ್. ಪುಟ್ಟಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕುಬೇರನಾಯ್ಕ, ಸಾಧನ ಅಕಾಡೆಮಿ ಶಿಕ್ಷಕ ಬಿ.ಕೆ. ಹರ್ಷ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.