ADVERTISEMENT

ಕುವೆಂಪು ವಿ.ವಿ ಅಧಿಕಾರಿಗಳಿಂದ ಭ್ರಷ್ಟಾಚಾರ: ಆರೋಪ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 7:11 IST
Last Updated 30 ಜನವರಿ 2018, 7:11 IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಎನ್ಎಸ್‌ಯುಐ ಕಾರ್ಯಕರ್ತರು ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕುವೆಂಪು ವಿವಿಯಲ್ಲಿ 2012ನೇ ಸಾಲಿನಲ್ಲಿ ಬಯಲಿಗೆ ಬಂದ ನಕಲಿ ಅಂಕಪಟ್ಟಿ ಮತ್ತು ಪರೀಕ್ಷಾ ಅಕ್ರಮಗಳಿಂದಾಗಿ ವಿಶ್ವವಿದ್ಯಾಲಯದ ತೆಗೆದುಕೊಂಡ ಕ್ರಮಗಳಿಂದಾಗಿಯೇ ಮತ್ತಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ಕೆಲ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇಂತಹ ಅಧಿಕಾರಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

2012ನೇ ಸಾಲಿನಲ್ಲಿ ಪರೀಕ್ಷಾ ಅಕ್ರಮ ಬೆಳಕಿಗೆ ಬಂದಾಗ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸಲು ಹೊರಗುತ್ತಿಗೆ ನೀಡಲಾಯಿತು. ಕುವೆಂಪು ವಿವಿ ಈ ರೀತಿ ಹೊರಗುತ್ತಿಗೆ ನೀಡುವ ಪೂರ್ವದಲ್ಲಿ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸಲು ವರ್ಷಕ್ಕೆ ಕೇವಲ ₹ 30–40 ಲಕ್ಷ ಗಳಷ್ಟೇ ಖರ್ಚಾಗುತ್ತಿತ್ತು. ಆದರೆ, ಹೊರಗುತ್ತಿಗೆ ನೀಡಿದ ನಂತರ ವಾರ್ಷಿಕ ₹ 3.5 ಕೋಟಿ ವೆಚ್ಚವಾಗುತ್ತಿದೆ ಎಂದು ದೂರಿದರು.

ADVERTISEMENT

ಅದೇ ರೀತಿ ಹಳೆಯ ವಿದ್ಯಾರ್ಥಿಗಳ ದಾಖಲಾತಿಗಳನ್ನು ಸಂಗ್ರಹಿಸಿಡುವ ನೆಪದಲ್ಲಿ ಹಾಗೂ ಅಂಕಪಟ್ಟಿಗಳನ್ನು ಡಿಜಿಟಲೀ ಕರಣಗೊಳಿಸುವ ಉದ್ದೇಶಕ್ಕಾಗಿ ವಿವಿಧ ಖಾಸಗಿ ಸಂಸ್ಥೆಗಳಿಗೆ ನಿಯಮಾವಳಿಗಳನ್ನು ಉಲ್ಲಂಘಿಸಿ ಕೋಟ್ಯಂತರ ರೂಪಾಯಿಗಳನ್ನು ಪಾವತಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ದಾಖಲಾತಿಗಳ ಡಿಜಿಟಲೀಕರಣವಾಗಿಲ್ಲ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ವಿಶ್ವ ವಿದ್ಯಾಲಯ ಆಡಳಿತ ಕಣ್ಣು ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಜಿ.ಮಧುಸೂದನ್ ಹಾಗೂ ಎನ್ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಬಾಲಾಜಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಚೇತನ್, ಸಿ.ಜಿ,ಮುರುಗೇಶ್, ವಾಗೀಶ್, ವಿಕಾಸ್ ನಾಡಿಗ್, ವಿನಯ್ ತಾಂದ್ಲೆ, ರವಿಕುಮಾರ್, ಪ್ರಮೋದ್, ವಿಜಯ್, ಧನಂಜಯ್, ಶ್ರವಣ, ಅನಿಲ್ ಆಚಾರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.