ADVERTISEMENT

ಅರಣ್ಯ ಇಲಾಖೆ ವಿರುದ್ಧ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 5:01 IST
Last Updated 3 ಫೆಬ್ರುವರಿ 2018, 5:01 IST

ಶಿಕಾರಿಪುರ: ಹಕ್ಕಿಪಿಕ್ಕಿ ಜನಾಂಗ ವಾಸಿಸುವ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯುತ್ತಿದ್ದ ಬೋರ್‌ವೆಲ್ ವಶಕ್ಕೆ ಪಡೆದ ಅರಣ್ಯ ಇಲಾಖೆ ವಿರುದ್ಧ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಎಂಸಿಆರ್‌ಪಿ ಕಾಲೊನಿ ಗ್ರಾಮದ ಸಮೀಪದ ಹಕ್ಕಿ ಪಿಕ್ಕಿ ಜನಾಂಗ ವಾಸಿಸುವ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಗುರುವಾರ ಕೊಳವೆಬಾವಿ ಕೊರೆಸುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಲಾರಿ ವಶಪಡಿಸಿಕೊಂಡಿರುವುದು ಖಂಡನೀಯ. ಮಾನವೀಯತೆ ಮರೆತು ಜನಸಾಮಾನ್ಯರ ಮೇಲೆ ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸಬಾರದು ಎಂದು ಶಾಸಕ ಬಿ.ವೈ. ರಾಘವೇಂದ್ರ ಕಿವಿಮಾತು ಹೇಳಿದರು. ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಗುರುಮೂರ್ತಿ ಮಾತನಾಡಿ, ‘ಶಾಸಕರಾಗಲಿ ಬಿಜೆಪಿ ಮುಖಂಡರಾಗಲಿ ಈವರೆಗೂ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಿಲ್ಲ. ಆದರೆ ಇಂದು ಹಕ್ಕಿ ಪಿಕ್ಕಿ ಜನಾಂಗದವರಿಗೆ ಕುಡಿಯುವ ನೀರು ಒದಗಿಸಲು ಬಂದಿದ್ದೇವೆ. ಅಧಿಕಾರಿಗಳು ಬಡ ಜನರಿಗೆ ಅನುಕೂಲ ಮಾಡುವ ಕೆಲಸ ಮಾಡಬೇಕು’ ಎಂದರು.

ADVERTISEMENT

ಬೋರ್‌ವೆಲ್‌ ಲಾರಿ ಬಿಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹಕ್ಕಿ ಪಿಕ್ಕಿ ಜನಾಂಗದ ಜನರೊಂದಿಗೆ ಶಾಸಕ ರಾಘವೇಂದ್ರ ಪ್ರತಿಭಟನಾ ಧರಣಿ ಮುಂದುವರಿಸಿದರು. ಸಭೆ ಹಿನ್ನೆಲೆ ಕೇಂದ್ರ ಸ್ಥಾನದಿಂದ ನಿರ್ಗಮಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ ಜತೆ ಅಂಬ್ಲಿಗೊಳ್ಳ ವಲಯ ಅರಣ್ಯಾಧಿಕಾರಿ ರಮೇಶ್‌ ಶೇತ ಸನದಿ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದರು.

ವಲಯ ಅರಣ್ಯಾಧಿಕಾರಿ ರಮೇಶ್‌ ಶೇತ ಸನದಿ ಮಾತನಾಡಿ, ‘ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಿಡಿಒ ಮೂಲಕ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸುತ್ತಿದ್ದೆವು ಎಂದು ಅರ್ಜಿ ಪಡೆಯಲು ಮೇಲಧಿಕಾರಿ ಸೂಚಿಸಿದ್ದಾರೆ. ಅರ್ಜಿ ಪಡೆದ ತಕ್ಷಣ ಲಾರಿ ಬಿಡುತ್ತೇವೆ’ ಎಂದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಸುರೇಶ್‌ನಾಯ್ಕ, ಮಲ್ಲಿಕಾರ್ಜುನರೆಡ್ಡಿ, ಮುಖಂಡರಾದ ಕೆ. ಹಾಲಪ್ಪ, ಶೇಖರಪ್ಪ, ಜೆ. ಸುಕೇಂದ್ರಪ್ಪ, ಮಾರವಳ್ಳಿ ಚಂದ್ರೇಗೌಡ, ಸೋಮನಗೌಡ, ಕೆ.ಜಿ. ವಸಂತಗೌಡ, ಚಾರಗಲ್ಲಿ ಪರಶುರಾಮ್‌, ಎಚ್‌. ಫಾಲಾಕ್ಷ, ರೇಣುಕಾಸ್ವಾಮಿ, ದಯಾನಂದ್, ಮಧು ಹೋತನಕಟ್ಟೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.