ADVERTISEMENT

638 ಜನರಿಗೆ ನಿವೇಶನ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 5:50 IST
Last Updated 26 ಏಪ್ರಿಲ್ 2012, 5:50 IST

ಸಾಗರ: ನಗರ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ಕೋರಿ ಸುಮಾರು 4 ಸಾವಿರ ಅರ್ಜಿ ಬಂದಿದ್ದು, ಮೊದಲ ಹಂತದಲ್ಲಿ 638 ಜನರಿಗೆ ನಿವೇಶನ ವಿತರಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರಸಭಾ ಕಚೇರಿಯಲ್ಲಿ ಬುಧವಾರ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶ್ರಯ ನಿವೇಶನ ವಿತರಿಸುವ ಸಂಬಂಧ ಜಂಬಗಾರುವಿನಲ್ಲಿ 7.20 ಎಕರೆ, ಸೂರನಗದ್ದೆ ಹಾಗೂ ಮಂಕಳಲೆಯಲ್ಲಿ ಸ್ಥಳ ಗುರುತಿಸಲಾಗಿದೆ. ನಗರಕ್ಕೆ ಹೊಂದಿಕೊಂಡಂತೆ ಇರುವ ಭೀಮನೇರಿ ಗ್ರಾಮದ ವ್ಯಾಪ್ತಿಗೆ ಬರುವ ಪ್ರದೇಶದಲ್ಲೂ ನಿವೇಶನ ವಿತರಣೆಗೆ ಭೂಮಿ ಪಡೆಯ ಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಆಶ್ರಯ ನಿವೇಶನ ಪಡೆದು ದೀರ್ಘಕಾಲವಾದರೂ ಅಲ್ಲಿ ಮನೆ ನಿರ್ಮಿಸದ ಹಲವು ಪ್ರಕರಣಗಳಿವೆ. ಇಂತಹ ನಿವೇಶನಗಳನ್ನು ಹಿಂದಕ್ಕೆ ಪಡೆದು ನಿವೇಶನರಹಿತರಿಗೆ ವಿತರಿಸುವ ಸಂಬಂಧ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.

ಆಶ್ರಯ ನಿವೇಶನ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ವಿರೋಧಪಕ್ಷಗಳ ಟೀಕೆಗೆ ಸಂಬಂಧಿಸಿದಂತೆ ಉತ್ತರಿಸಿದ ಅವರು ನಿವೇಶನಕ್ಕೆ ಅರ್ಜಿ ಸಲ್ಲಿಸಿದವರ ವಿಳಾಸ ಸರಿಯಾಗಿದೆಯೆ ಹಾಗೂ ಅವರು ಆರ್ಥಿಕವಾಗಿ ಹಿಂದುಳಿದ ಅರ್ಹ ಫಲಾನುಭವಿಗಳೆ ಎಂಬುದನ್ನು ಪರಿಶೀಲಿಸಿದ ನಂತರವಷ್ಟೆ ನಿವೇಶನ ಮಂಜೂರು ಮಾಡಲು ಸಾಧ್ಯ. ಈ ವಿಷಯದಲ್ಲಿ ಅವಸರ ಮಾಡಿದರೆ ಅನರ್ಹರಿಗೆ ನಿವೇಶನ ದೊರಕುತ್ತದೆ ಎಂಬ ವಿಷಯವನ್ನು ವಿರೋಧ ಪಕ್ಷಗಳು ಅರಿಯಬೇಕು ಎಂದು ಹೇಳಿದರು.

ನಗರಸಭಾ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ತಹಶೀಲ್ದಾರ್ ಎಸ್. ಯೋಗೇಶ್ವರ್, ಕಚೇರಿ ವ್ಯವಸ್ಥಾಪಕ ಶಿವಮೂರ್ತಿ, ಆಶ್ರಯ ಸಮಿತಿ ಸದಸ್ಯರುಗಳಾದ ಪ್ರತಾಪ್, ಮೌಲಿ ನಜರತ್, ಶ್ರೀನಿವಾಸ್, ಈಶ್ವರ ಸಂದೇಶಕರ್ ಇನ್ನಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.