ADVERTISEMENT

7,966 ಪ್ರಕರಣ ಇತ್ಯರ್ಥ ಗುರಿ

19ರಂದು ಬೃಹತ್ ಲೋಕ ಅದಾಲತ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 6:54 IST
Last Updated 17 ಡಿಸೆಂಬರ್ 2020, 6:54 IST

ಶಿವಮೊಗ್ಗ: ಈ ವರ್ಷದ ಕೊನೆಯ ಬೃಹತ್ ಲೋಕ ಅದಾಲತ್ ಡಿ.19ರಂದು ಆಯೋಜಿಸಲಾಗಿದ್ದು, ರಾಜೀ ಸಂಧಾನದ ಮೂಲಕ 7966 ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮುಸ್ತಫಾ ಹುಸೇನ್ ತಿಳಿಸಿದರು.

‘ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಚೆಕ್‍ಬೌನ್ಸ್, ರಾಜಿಯಾಗಬಹುದಾದ ಕ್ರಿಮಿನಲ್ ಹಾಗೂ ಇತರ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪ್ರಕರಣಗಳ ಉಭಯ ಕಕ್ಷಿದಾರರನ್ನು ಕರೆಯಿಸಿ ಅವರ ಒಪ್ಪಿಗೆಯ ಪ್ರಕಾರ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 51,800 ಪ್ರಕರಣಗಳು ಬಾಕಿಯಿದ್ದು, ಅವುಗಳ ಪೈಕಿ ರಾಜಿಯಾಗಬಹುದಾದ 27,030 ಪ್ರಕರಣಗಳನ್ನು ಗುರುತಿಸಲಾಗಿದೆ. ಲೋಕ ಅದಾಲತ್ ಇಡೀ ದಿನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ಇತ್ಯರ್ಥ ನಿರೀಕ್ಷಿಸಲಾಗಿದೆ. ಜಿಲ್ಲಾ ನ್ಯಾಯಾಲಯದಲ್ಲಿ 12ರಿಂದ16 ಬೆಂಚುಗಳು ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ 4 ಬೆಂಚು
ಗಳಲ್ಲಿ ಪ್ರಕರಣಗಳನ್ನು ಕೈಗೆತ್ತಿಕೊಳ್ಳ ಲಾಗುವುದು ಎಂದು ವಿವರಿಸಿದರು.

ADVERTISEMENT

₹ 4.19 ಕೋಟಿ ಸಂತ್ರಸ್ತ ಪರಿಹಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆಯಡಿ ಮತ್ತೊಬ್ಬರ ಅಪರಾಧಿಕ ಕೃತ್ಯಗಳಿಂದ ಯಾವುದೇ ರೀತಿಯಲ್ಲಿ ಗಾಯಗೊಂಡ ನೊಂದ ವ್ಯಕ್ತಿಗಳಿಗೆ ಪರಿಹಾರ ನೀಡಲಾಗುತ್ತಿದೆ. ಇದುವರೆಗೆ ದಾಖಲಾದ 288 ಪ್ರಕರಣಗಳ ಪೈಕಿ 283 ಪ್ರಕರಣಗಳನ್ನು ಇತ್ಯರ್ಥಪಡಿಸಿ, 168 ಪ್ರಕರಣಗಳಲ್ಲಿ ₹ 4.19 ಕೋಟಿ ಪರಿಹಾರವನ್ನು ನೊಂದ ವ್ಯಕ್ತಿಗಳಿಗೆ ನೀಡಲಾಗಿದೆ. ಅಪರಾಧಿಕ ಪ್ರಕರಣಗಳಲ್ಲಿ ನೊಂದ ವ್ಯಕ್ತಿಗಳು ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆಯಬಹುದು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಸರಸ್ವತಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಯಂತ್ ಕುಮಾರ್, ಬಾರ್ ಕೌನ್ಸಿಲ್ ಉಪಾಧ್ಯಕ್ಷ ಪಿ.ಎನ್. ರಾಜಾರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.