ADVERTISEMENT

ಶಿವಮೊಗ್ಗ| ಸಾಗರದಲ್ಲಿ ಎಎಪಿಯ ಅಚ್ಚರಿಯ ಫಲಿತಾಂಶ: ದಿವಾಕರ್ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 1 ಮೇ 2023, 7:40 IST
Last Updated 1 ಮೇ 2023, 7:40 IST
ಸಾಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೆ.ದಿವಾಕರ್ ತಮ್ಮ ಪರವಾಗಿ ಮತ ಯಾಚನೆ ಮಾಡಿದರು.
ಸಾಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೆ.ದಿವಾಕರ್ ತಮ್ಮ ಪರವಾಗಿ ಮತ ಯಾಚನೆ ಮಾಡಿದರು.   

ಸಾಗರ: ’ಕ್ಷೇತ್ರದ ವಿದ್ಯಾವಂತ ಮತದಾರರು ಜಾತಿ, ಧರ್ಮ ಮೀರಿ ಮತ ಚಲಾಯಿಸುವುದರ ಲಾಭ ನಮ್ಮ ಪಕ್ಷಕ್ಕೆ ದೊರಕಲಿದೆ. ಈ ಬಾರಿ ಸಾಗರ ಕ್ಷೇತ್ರದಲ್ಲಿ ನಮ್ಮ ಪಕ್ಷ ಅಚ್ಚರಿಯ ಫಲಿತಾಂಶ ನೀಡಲಿದೆ’ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೆ.ದಿವಾಕರ್ ಹೇಳಿದರು.

ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಮತಯಾಚಿಸಿ ಮಾತನಾಡಿದ ಅವರು, ‘ಜಾತಿ, ಹಣ ಮೀರಿದ ರಾಜಕಾರಣದಲ್ಲಿ ಆಮ್ ಆದ್ಮಿ ತೊಡಗಿದೆ. ಭ್ರಷ್ಟಾಚಾರದ ಕಬಂಧ ಬಾಹುಗಳಲ್ಲಿ ಸಿಲುಕಿರುವ ಈ ಕ್ಷೇತ್ರವನ್ನು ಈ ಬಾರಿ ಮತದಾರರು ಬಿಡಿಸಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

’5 ವರ್ಷಗಳ ಅವಧಿಯಲ್ಲಿ ಶಾಸಕ ಹರತಾಳು ಹಾಲಪ್ಪ ಅವರು ಹಲವು ರೀತಿಯ ಭ್ರಷ್ಟಾಚಾರ, ಅಕ್ರಮ ನಡೆಸಿದ್ದಾರೆ. ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅವರಲ್ಲಿ ಕ್ರಿಯಾಶೀಲತೆಯ ಕೊರತೆ ಇದೆ. ಇವರಿಬ್ಬರನ್ನೂ ಈ ಭಾಗದ ಜನ ತಿರಸ್ಕರಿಸಲು ಮುಂದಾಗಿದ್ದಾರೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಬಿಜೆಪಿ ನಾಯಕರು ದೈನೇಸಿ ಸ್ಥಿತಿಗೆ ತಲುಪಿದ್ದಾರೆ ಎಂಬುದಕ್ಕೆ ಈ ಕ್ಷೇತ್ರಕ್ಕೆ ರಾಜ್ಯ, ಜಿಲ್ಲೆಯ ಮುಖಂಡರ ಬದಲು ಉತ್ತರಾಖಂಡ್ ರಾಜ್ಯದ ಮುಖಂಡರನ್ನು ಕರೆಸಿರುವುದೆ ಸಾಕ್ಷಿಯಾಗಿದೆ. ಸ್ಥಳೀಯ ಮುಖಂಡರು ಮತ ಕೇಳಿದರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಅಭ್ಯರ್ಥಿಗೆ ಮನವರಿಕೆಯಾಗಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ನ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ 224 ಕ್ಷೇತ್ರಗಳ ಪೈಕಿ 107 ಕ್ಷೇತ್ರಗಳಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಪ್ರಚಾರ ನಡೆಸಿದ್ದರು. ಅವರು ಪ್ರಚಾರ ಕೈಗೊಂಡ 96 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಸೋಲು ಉಂಟಾಗಿತ್ತು. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಮಾಡುವ ಕ್ಷೇತ್ರಗಳ ಪರಿಸ್ಥಿತಿಯೂ ಅದೇ ರೀತಿ ಆಗಲಿದೆ’ ಎಂದು ವ್ಯಂಗ್ಯವಾಡಿದರು.

ಪ್ರಮುಖರಾದ ವಿಜಯಕುಮಾರ್, ಪರಶುರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.