ADVERTISEMENT

ತಾಂತ್ರಿಕತೆ ಅಳವಡಿಕೆ, ರೈತರಿಗೆ ಕೃಷಿಯಲ್ಲಿ ಭವಿಷ್ಯ: ನಾದಮಯಾನಂದನಾಥ ಸ್ವಾಮೀಜಿ

ಕೃಷಿ, ತೋಟಗಾರಿಕೆ ಮೇಳ: ಆದಿಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:51 IST
Last Updated 11 ನವೆಂಬರ್ 2025, 4:51 IST
ಶಿವಮೊಗ್ಗದ ನವುಲೆಯಲ್ಲಿ ಸೋಮವಾರ ಕೃಷಿ ಮತ್ತು ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭವನ್ನು ಆದಿಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು
ಶಿವಮೊಗ್ಗದ ನವುಲೆಯಲ್ಲಿ ಸೋಮವಾರ ಕೃಷಿ ಮತ್ತು ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭವನ್ನು ಆದಿಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು   

ಶಿವಮೊಗ್ಗ: ‘ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಹಾಗೂ ಕೃಷಿ ಸಂಬಂಧಿತ ಇಲಾಖೆ ಹಾಗೂ ಸಂಸ್ಥೆಗಳ ಸಂಶೋಧಕರ ಮಾರ್ಗದರ್ಶನ ಪಡೆಯುವಲ್ಲಿ ರೈತರು ಹಿಂದುಳಿಯುತ್ತಿದ್ದಾರೆ. ಅದು ಬದಲಾಗಬೇಕು. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ರೈತರು ಹಿಂದುಳಿಯಲು ಸಾಧ್ಯವೇ ಇಲ್ಲ’ ಎಂದು ಆದಿಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಕೃಷಿ ಮತ್ತು ತೋಟಗಾರಿಕೆ ಮೇಳದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ದೇಶದ ಬೆಳವಣಿಗೆಯಲ್ಲಿ ರೈತರು ಮತ್ತು ಸೈನಿಕರದ್ದು ಪಾತ್ರ ದೊಡ್ಡದು. ಕೃಷಿಯಲ್ಲಿ ರೈತರು ಹಳೆಯ ಪದ್ಧತಿಯನ್ನೇ ಮುಂದುವರಿಸುವ ಬದಲು ವಿಜ್ಞಾನಿಗಳ ಸಂಶೋಧನೆಯ ಸಲಹೆಯನ್ನು ಅಳವಡಿಸಿಕೊಂಡರೆ ಯಶಸ್ಸು ಕಾಣಲು ಸಾಧ್ಯ’ ಎಂದರು.

ADVERTISEMENT

‘ತಾಯಿಯಂತಹ ಭೂಮಿ ಎಂದಿಗೂ ಅನ್ನದಾತರಿಗೆ ದ್ರೋಹ ಬಗೆಯುವುದಿಲ್ಲ. ಆದರೆ, ಅನ್ನ ನೀಡುವ ಭೂಮಿಯನ್ನೇ ಅತಿಯಾಸೆಯಿಂದ ಮಲಿನ ಮಾಡುತ್ತಿದ್ದೇವೆ. ಅಭಿವೃದ್ಧಿ ಹೆಸರಲ್ಲಿ ರಸಗೊಬ್ಬರ ಬಳಕೆ ಹೆಚ್ಚಳವಾಗುತ್ತಿದೆ. ಇದರಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳುವ ಜೊತೆಗೆ ಬೆಳೆಗಳ ಇಳುವರಿಯೂ ಕುಂಠಿತಗೊಳ್ಳುತ್ತಿದೆ. ಇದನ್ನು ರೈತರು ಮನಗಾಣಬೇಕಿದೆ’ ಎಂದು ಸಲಹೆ ನೀಡಿದರು.

‘ಸಂಶೋಧನಾ ವಿದ್ಯಾರ್ಥಿಗಳು ಕೃಷಿಯನ್ನು ಉಳಿಸುವ ಕೆಲಸ ಮಾಡಬೇಕಿದೆ. ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ ಸೇರಿ ಬೆಳೆಗಳ ಹಾನಿಯಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ದೂರ ಮಾಡಲು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಸಿ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಕೆ.ಸಿ. ಶಶಿಧರ, ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಹರಿಣಿಕುಮಾರ್, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ನಿರ್ದೇಶಕ ಬಿ.ಕೆ. ಕುಮಾರಸ್ವಾಮಿ, ಜೆ.ಜಿ. ಕಾವೇರಿಯಪ್ಪ, ಎಚ್.ಡಿ.ದೇವಿಕುಮಾರ್, ಎಚ್.ಎಸ್. ಶಶಾಂಕ್, ಮೇಳದ ಅಧ್ಯಕ್ಷ ಜಿ.ಕೆ.ಗಿರಿಜೇಶ್, ಉಪಾಧ್ಯಕ್ಷ ಬಿ.ಎಂ.ದುಷ್ಯಂತ್‌ಕುಮಾರ್, ಕಾಂಗ್ರೆಸ್ ಮುಖಂಡ ವೈ.ಎಚ್.ನಾಗರಾಜ್ ಉಪಸ್ಥಿತರಿದ್ದರು. 

ಕೃಷಿ ಮೇಳದಲ್ಲಿ ಸಾರ್ವಜನಿಕರು ಅಡಿಕೆ ಕೃಷಿಯ ಬಗ್ಗೆ ಮಾಹಿತಿ ಪಡೆದರು 

‘ಕೃಷಿಕರ ಬೆನ್ನಿಗೆ ನಿಂತಿದ್ದ ಮನಮೋಹನ್‌ ಸಿಂಗ್’

‘ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ದೇಶದಲ್ಲಿ ಆಹಾರ ಸುರಕ್ಷತಾ ಕಾಯ್ದೆ ಜಾರಿಗೆ ತರುವ ಮೂಲಕ ರೈತರ ಬೆನ್ನಿಗೆ ನಿಂತಿದ್ದರು. ಕೇಂದ್ರದಿಂದ ರೈತರ ₹ 72000 ಕೋಟಿ ಸಾಲ ಮನ್ನಾ ಬೆಳೆಗಳಿಗೆ ಬೆಂಬಲ ಬೆಲೆ ರಸಗೊಬ್ಬರ ನೀರಾವರಿ ವ್ಯವಸ್ಥೆಗಳ ಮೂಲಕ ರೈತರ ಕಲ್ಯಾಣಕ್ಕೆ ಶ್ರಮಿಸಿದ್ದರು’ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಸ್ಮರಿಸಿದರು. ‘ರೈತ ಯಾವುದೇ ಬೆಳೆ ಬೆಳೆಯದಿದ್ದರೆ ಭವಿಷ್ಯದಲ್ಲಿ ದೇಶಕ್ಕೆ ಗಂಡಾಂತರ ಎದುರಾಗಲಿದೆ. ಹೀಗಾಗಿ ಮೊದಲು ಅನ್ನದಾತರ ಬಲವರ್ಧನೆ ಮಾಡಬೇಕಿದೆ. ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಸರ್ಕಾರ ಆ ಕೆಲಸ ಮಾಡಬೇಕಿದೆ. ರೈತರ ಪರವಾಗಿ ಸರ್ಕಾರಗಳು ನಿಲ್ಲದಿದ್ದರೆ ದೇಶ ಸಂಕಷ್ಟಕ್ಕೆ ಸಿಲುಕಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಮಗ್ರ ಸಾವಯವ ಕೃಷಿ ಅಳವಡಿಕೆಗೆ ಸಲಹೆ

‘ಸಮಗ್ರ ಕೃಷಿ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಎಲ್ಲ ರೈತರೂ ಅಳವಡಿಸಿಕೊಳ್ಳಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಸಲಹೆ ನೀಡಿದರು. ‘ಆಧುನಿಕತೆಯ ಭರಾಟೆಯಲ್ಲಿ ರೈತರು ಯಂತ್ರೋಪಕರಣಗಳ ಮೊರೆ ಹೋಗುತ್ತಿದ್ದಾರೆ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಯ ಅಗತ್ಯ ಇದೆ. ರೈತನೇ ಒಬ್ಬ ವಿಜ್ಞಾನಿ ಇದ್ದಂತೆ. ಪುರಾತನ ಕಾಲದಿಂದಲೂ ಯಾವುದೇ ತಂತ್ರಜ್ಞಾನಗಳಿಲ್ಲದೆ ವಿಜ್ಞಾನಿಗಳ ಸಲಹೆಗಳಿಲ್ಲದೆ ರೈತರು ಕೃಷಿ ಮಾಡಿಕೊಂಡು ಬಂದಿದ್ದಾರೆ. ತಂತ್ರಜ್ಞಾನ ವಂಶಪಾರಂಪರ್ಯವಾಗಿ ನಮ್ಮ ಪೀಳಿಗೆಗೆ ಬಂದಿದೆ. ಆದರೆ ಇಂದು ಹೊಸ ತಳಿಗಳು ಬಂದ ಮೇಲೆ ಕೃಷಿ ಪದ್ಧತಿಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ಏಕ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಮಿಶ್ರ ಅಥವಾ ಸಮಗ್ರ ಬೆಳೆಯತ್ತ ಚಿಂತನೆ ಮಾಡಬೇಕಿದೆ’ ಎಂದರು. ‘ರೈತರು ಇಂದು ವಿಶ್ವಮಟ್ಟದಲ್ಲಿ ಸ್ಪರ್ಧೆ ಎದುರಿಸುತ್ತಿದ್ದಾರೆ. ಪ್ರಪಂಚವೇ ಒಂದು ಮಾರುಕಟ್ಟೆಯಾಗಿದ್ದು ಬೇರೆ ಬೇರೆ ದೇಶಗಳ ಬೆಳೆಗಳು ಭಾರತವನ್ನು ಪ್ರವೇಶಿಸುತ್ತಿವೆ. ಅವುಗಳಿಗೆ ನಮ್ಮ ಬೆಳೆಗಳು ಪೈಪೋಟಿ ನೀಡಬೇಕಿದೆ. ಅದಕ್ಕಾಗಿ ರೈತರು ಸಜ್ಜಾಗಬೇಕಿದೆ’ ಎಂದರು.

ಕೊನೆಯ ದಿನ ಮಧ್ಯಾಹ್ನವೇ ಖಾಲಿ ಖಾಲಿ..

ಕೊನೆಯ ದಿನವಾದ ಸೋಮವಾರ ಕೃಷಿ ಮೇಳ ಕಣ್ತುಂಬಿಕೊಳ್ಳಲು ಬಂದಿದ್ದ ಜನರು ಮಧ್ಯಾಹ್ನದ ನಂತರ ನಿರಾಶೆ ಅನುಭವಿಸಿದರು. ಮಧ್ಯಾಹ್ನವೇ ಸಮಾರೋಪ ಸಮಾರಂಭ ಮುಗಿದಿದ್ದರಿಂದ ಬಹುತೇಕ ಮಳಿಗೆಗಳವರು ಖಾಲಿ ಮಾಡಿದ್ದರು. ಸಂಜೆಯ ಹೊತ್ತಿಗೆ ಮೇಳ ಸಂಪೂರ್ಣ ಕಳೆಗುಂದಿತ್ತು. ಜನರು ಇದ್ದರೂ ಪ್ರಾತ್ಯಕ್ಷಿಕೆ ಕೊಡುವವರು ವ್ಯಾಪಾರಸ್ಥರು ಇರಲಿಲ್ಲ. ತಿಂಡಿ ಅಂಗಡಿಯವರು ಮಾತ್ರ ಇದ್ದರು. ‘ಸೋಮವಾರ ರೈತರ ದಿನ. ಕೃಷಿ ಚಟುವಟಿಕೆ ಇರುವುದಿಲ್ಲ. ಮೇಳ ನಾಲ್ಕು ದಿನ ಇರಲಿದೆ ಎಂದು ಹೇಳಿದ್ದರು. ಹೀಗಾಗಿ ಸಂಜೆ ಬಂದಿದ್ದೇವೆ. ಆದರೆ ಬಹುತೇಕ ಮಳಿಗೆಗಳು ಖಾಲಿ ಆಗಿವೆ. ಪೂರ್ತಿ ನಾಲ್ಕು ದಿನವೂ ಇರಬೇಕಿತ್ತು’ ಎಂದು ಹೊನ್ನಾಳಿಯ ರೈತ ಶಿವು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.