ADVERTISEMENT

ಶಿವಮೊಗ್ಗಕ್ಕೆ ಏಮ್ಸ್‌ ಮಾದರಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗಾಗಲೇ ಚರ್ಚೆ: ಸಂಸದ ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 4:39 IST
Last Updated 17 ಜನವರಿ 2026, 4:39 IST
ಶಿವಮೊಗ್ಗದಲ್ಲಿ ಶುಕ್ರವಾರ ಅಪರೂಪದ ಅಂಚೆ ಚೀಟಿ ಹಾಗೂ ಹಳೆಯ ನಾಣ್ಯಗಳನ್ನು ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹಾಗೂ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ ವೀಕ್ಷಣೆ ಮಾಡಿದರು
ಶಿವಮೊಗ್ಗದಲ್ಲಿ ಶುಕ್ರವಾರ ಅಪರೂಪದ ಅಂಚೆ ಚೀಟಿ ಹಾಗೂ ಹಳೆಯ ನಾಣ್ಯಗಳನ್ನು ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹಾಗೂ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ ವೀಕ್ಷಣೆ ಮಾಡಿದರು   

ಶಿವಮೊಗ್ಗ : ಐಐಟಿ, ಏಮ್ಸ್ ಮಾದರಿಯ ಪ್ರತಿಷ್ಟಿತ ಅಖಿಲ ಭಾರತ ಆಯುರ್ವೇದ ವಿಜ್ಞಾನ ಸಂಶೋಧನಾ ಹಾಗೂ ಚಿಕಿತ್ಸಾ ಸಂಸ್ಥೆಯನ್ನು (AIIA) ಶಿವಮೊಗ್ಗಕ್ಕೆ ತರುವ ಪ್ರಯತ್ನ ನಡೆದಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಶಿವಮೊಗ್ಗ, ತೀರ್ಥಹಳ್ಳಿ, ಶೃಂಗೇರಿ ಮೂಲಕ ಮಂಗಳೂರು ಹಾಗೂ ಹಾಸನಕ್ಕೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆಗೆ ಆದೇಶವಾಗಿದೆ. ಸೊರಬಕ್ಕೂ ರೈಲು ಮಾರ್ಗ ಕಲ್ಪಿಸುವ ಮೂಲಕ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ರೈಲ್ವೆ ಜಾಲದಲ್ಲಿ ಬೆಸೆಯುವ ಕಾರ್ಯ ನಡೆದಿದೆ ಎಂದು ಹೇಳಿದರು.

ತಾಳಗುಪ್ಪ–ಶಿರಸಿ–ಹುಬ್ಬಳ್ಳಿಗೆ ಹೊಸ ರೈಲು ಮಾರ್ಗ, ತಾಳಗು‍ಪ್ಪದಿಂದ ಹೊನ್ನಾವರ ನೂತನ ರೈಲು ಮಾರ್ಗ, ಭದ್ರಾವತಿ–ಚಿಕ್ಕಜಾಜೂರು ಹೊಸ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಹಾಗೂ ಶಿವಮೊಗ್ಗದಿಂದ ಬೀರೂರು ದ್ವಿಪಥ ರೈಲು ಮಾರ್ಗ ನಿರ್ಮಾಣಕ್ಕೆ ಸ್ಥಳ ಸಮೀಕ್ಷೆಗೆ ಹಣ ಬಿಡುಗಡೆ ಆಗಿದೆ ಎಂದು ತಿಳಿಸಿದರು.

ADVERTISEMENT

ಮೂಲ ಸೌಕರ್ಯಕ್ಕೆ ಒತ್ತು: ನರೇಂದ್ರ ಮೋದಿ ಪ್ರಧಾನಿ ಆದ ನಂತರ ದೇಶದಲ್ಲಿ ಶೌಚಾಲಯ, ಕುಡಿಯುವ ನೀರು, ರಸ್ತೆ, ರೈಲ್ವೆ, ಸೇತುವೆಯಂತಹ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಇದರಿಂದ ಮುಂದುವರೆದ ದೇಶಗಳಲ್ಲಿ ಕಾಣುತ್ತಿದ್ದ ಸವಲತ್ತುಗಳು ಈಗ ಭಾರತದಲ್ಲಿ ನೋಡುತ್ತಿದ್ದೇವೆ. ಹೀಗಾಗಿ ದೇಶದತ್ತ ವಿಶ್ವದ ಗಮನ ನೆಟ್ಟಿದೆ ಎಂದು ಹೇಳಿದ ಸಂಸದ ಬಿ.ವೈ.ರಾಘವೇಂದ್ರ, ಮೋದಿ ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ನಿರ್ಮಾಣದತ್ತ ಹೆಚ್ಚು ಒತ್ತು ಕೊಟ್ಟಿರುವೆ. ಹೆದ್ದಾರಿ, ರೈಲು ಮಾರ್ಗ,, ಸೇತುವೆ, ಮೊಬೈಲ್ ಟವರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಹಸಿರುಮಕ್ಕಿ ಸೇತುವೆ ನಿರ್ಮಾಣದಲ್ಲಿ ಬಿಜೆಪಿಯ ಪಾಲು ಇದೆ. ಅದಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ₹50 ಲಕ್ಷ ಮಂಜೂರು ಮಾಡಿ ಚಾಲನೆ ಕೊಟ್ಟಿದ್ದರು. ಅದೇ ರೀತಿ ಹೊಸನಗರ ಬಳಿ ಸಿಗಂದೂರು ಸೇತುವೆಯಷ್ಟೇ ದೊಡ್ಡದಾದ ಬೆಕ್ಕೋಡಿ ಸೇತುವೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ ಬಿ.ವೈ.ರಾಘವೇಂದ್ರ, ಬೈಂದೂರು ತಾಲ್ಲೂಕಿನ ಗಂಗೊಳ್ಳಿ ಬಳಿ ಅರಬ್ಬಿ ಸಮುದ್ರದಲ್ಲಿ 2 ಕಿ.ಮೀಗೂ ಹೆಚ್ಚು ದೂರ ಸೇತುವೆ ನಿರ್ಮಾಣ ಮಾಡಿ ಕುಂದಾಪುರ‌ಕ್ಕೆ ಸಂಪರ್ಕ ಕಲ್ಪಿಸುವ ಕೆಲಸವೂ ನಡೆದಿದೆ ಎಂದು ಹೇಳಿದರು. 

ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ₹528.41 ಕೋಟಿ ವೆಚ್ಚದಲ್ಲಿ 1177.21 ಕಿ.ಮೀ ಗ್ರಾಮೀಣ ಸಂಪರ್ಕ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ, ಮನೆ ಮನೆಗೆ ಗಂಗೆ ಯೋಜನೆಯಡಿ ಗ್ರಾಮೀಣರಿಗೆ ಕುಡಿಯುವ ನೀರು ಕಲ್ಪಿಸಲಾಗುತ್ತಿದೆ ಎಂದರು.

ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಟರ್ಮಿನಲ್ ಶಿವಮೊಗ್ಗ ನಗರಕ್ಕೆ ಪರ್ಯಾಯ ಕೇಂದ್ರವಾಗಲಿದೆ. ಈ ಟರ್ಮಿನಲ್ ಉದ್ಘಾಟನೆಯಾದ ನಂತರ ಶಿವಮೊಗ್ಗದಿಂದ ಬೆಂಗಳೂರು ಸೇರಿದಂತೆ ಇತರ ಪ್ರಮುಖ ನಗರಗಳಿಗೆ ಹೆಚ್ಚಿನ ರೈಲುಗಳನ್ನು ಆರಂಭಿಸಲು ನೆರವಾಗಲಿದೆ ಎಂದರು. 

ಸಂವಾದದಲ್ಲಿ ಪತ್ರಕರ್ತರಾದ ಎನ್.ಮಂಜುನಾಥ್, ಎಚ್.ಯು.ವೈದ್ಯನಾಥ್, ನಾಗರಾಜ್ ನೇರಿಗೆ, ಆರ್‌.ಎಸ್‌.ಹಾಲಸ್ವಾಮಿ ಇದ್ದರು.

ಸಂವಾದದಲ್ಲಿ ಕೇಳಿಬಂದಿದ್ದು..

* ವಕೀಲರ ಅನುಕೂಲಕ್ಕೆ ಮೂಲ ಸೌಕರ್ಯ ಅಭಿವೃದ್ಧಿಗೆ ಜಿಲ್ಲೆಯ ಪ್ರತೀ ನ್ಯಾಯಾಲಯಕ್ಕೆ ₹25 ಲಕ್ಷ ಅನುದಾನ * ವಿಮಾನ ನಿಲ್ದಾಣಕ್ಕೆ ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆಗೆ 6 ತಿಂಗಳ ಹಿಂದೆಯೇ ಉಪಕರಣ ಬಂದಿವೆ. ಅವುಗಳ ಅಳವಡಿಕೆಗೆ ರಾಜ್ಯ ಸರ್ಕಾರ ₹6 ಕೋಟಿ ಬಿಡುಗಡೆ ಮಾಡಲಿ * ಶಿವಮೊಗ್ಗದಲ್ಲೂ ಅತ್ಯಾಧುನಿಕ ಸ್ಟುಡಿಯೊದೊಂದಿಗೆ ಭದ್ರಾವತಿ ಆಕಾಶವಾಣಿಯ ಎಫ್‌ಎಂ ಕೇಂದ್ರ ಸಿದ್ಧ. ಕೇಂದ್ರ ಸಚಿವರಿಂದ ಶೀಘ್ರ ಲೋಕಾರ್ಪಣೆ * ವಿಐಎಸ್‌ಎಲ್‌ ಗುತ್ತಿಗೆ ನೌಕರರ ಪರ ನಿಂತು ಅವರ ಉದ್ಯೋಗಕ್ಕೆ ಕುತ್ತು ಬಾರದಂತೆ ನೆರವಾಗಿರುವೆ ಕಾರ್ಖಾನೆಗೆ ಶಾಶ್ವತ ನೆರವು ಕಲ್ಪಿಸಲು ಕೆಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಪ್ರಯತ್ನ * ವಿಶ್ವಕರ್ಮ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ 14,143 ಕುಶಲಕರ್ಮಿಗಳಿಗೆ ತರಬೇತಿ.  * ಶಿವಮೊಗ್ಗದ ಗುಂಡಪ್ಪ ಶೆಡ್, ವಿದ್ಯಾನಗರದಲ್ಲಿ ಅಂಡರ್ ಪಾಸ್ ನಿರ್ಮಾಣ ಕಾರ್ಯ ಶೀಘ್ರ ಆರಂಭ. ಫ್ರೀಡಂ ಪಾರ್ಕ್ ಬಳಿ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಒಪ್ಪಿಗೆ.