ADVERTISEMENT

ಅಂಬೇಡ್ಕರ್ ಅಂತ್ಯಕ್ರಿಯೆಯಲ್ಲೂ ರಾಜಕೀಯ ಮಾಡಿದ್ದ ಕಾಂಗ್ರೆಸ್‌

ಅಂಬೇಡ್ಕರ್‌ 131ನೇ ಜಯಂತಿ ಕಾರ್ಯಕ್ರಮದಲ್ಲಿ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 7:24 IST
Last Updated 24 ಏಪ್ರಿಲ್ 2022, 7:24 IST
ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ಶನಿವಾರ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ಶನಿವಾರ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.   

ತೀರ್ಥಹಳ್ಳಿ: ಡಾ. ಬಿ.ಆರ್‌. ಅಂಬೇಡ್ಕರ್‌ ಹೆಸರಿನಲ್ಲಿ ಕಾಂಗ್ರೆಸ್‌ 65 ವರ್ಷ ರಾಜಕೀಯ ಮಾಡಿದೆ. ದೆಹಲಿಯಲ್ಲಿ ಅಂತ್ಯಕ್ರಿಯೆಗೆ ಅನುಮತಿ ಕೇಳಿದಾಗ ಉಳಿದ ನಾಯಕರ ಪ್ರತಿಮೆ ಮೌಲ್ಯ ಕುಂದುತ್ತದೆ ಎಂಬ ಕಾರಣಕ್ಕೆ ಜಾಗ ನೀಡದೆ ತಾರತಮ್ಯ ಮಾಡಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.

ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ತಾಲ್ಲೂಕು ಮಂಡಲ ಬಿಜೆಪಿ, ಎಸ್‌ಸಿ ಮೋರ್ಚಾ ಹಮ್ಮಿಕೊಂಡಿದ್ದ ಡಾ.ಬಿ.ಆರ್.‌ ಅಂಬೇಡ್ಕರ್‌ ಅವರ 131ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂದಿನ ಕೇಂದ್ರ ಸರ್ಕಾರ ಮುಂಬೈಗೆ ಅಂಬೇಡ್ಕರ್ ದೇಹ ಸಾಗಿಸಲು ಸಹಕಾರ ನೀಡಲಿಲ್ಲ. ಅಂಬೇಡ್ಕರ್‌ ಸ್ನೇಹಿತರು ತಮ್ಮ ಸ್ವಂತ ಕಾರನ್ನು ಮಾರಿ ಬಂದ ಹಣದಲ್ಲಿ ಅಂತ್ಯಕ್ರಿಯೆ ನಡೆಸಿದ್ದರು. ಎಲ್ಲಾ ಅವಕಾಶ ಇದ್ದರೂ ನಿರ್ಗತಿಕನಂತೆ ಸಮುದ್ರ ತೀರದಲ್ಲಿ ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ನಡೆಯಿತು ಎಂದರು.

ADVERTISEMENT

ಕೇಂದ್ರದ ಬಿಜೆಪಿ ಸರ್ಕಾರ ಬಂದ ದಿನದಿಂದ ಪರಿಶಿಷ್ಟ ಸಮುದಾಯಕ್ಕೆ ನ್ಯಾಯ ಒದಗಿಸಿದೆ ಎಂದು ತಿಳಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಅಂಬೇಡ್ಕರ್‌ ಸಿದ್ಧಾಂತದ ಆಧಾರದ ಮೇಲೆ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ರಾಷ್ಟ್ರೀಯತೆ ಉಳಿಸುವ ನಿಟ್ಟಿನಲ್ಲಿ ಕಟ್ಟಕಡೆಯ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸಿದೆ. ಇಂಗ್ಲೆಂಡ್‌ನಲ್ಲಿ ಅಂಬೇಡ್ಕರ್‌ ಓದಿದ ಕಟ್ಟಡವನ್ನು ಭಾರತ ಸರ್ಕಾರ ಖರೀದಿಸಿ ದಲಿತ ಸಮುದಾಯದ ವಿದ್ಯಾರ್ಥಿಗಳ ಹಾಸ್ಟೆಲ್‌ ಆಗಿ ಪರಿವರ್ತಿಸಿದೆ. ಅಸ್ಪೃಶ್ಯತೆ ತೊಲಗಿಸುವ ನಿಟ್ಟಿನಲ್ಲಿ ಧ್ವನಿಯಾಗಿ ಕೆಲಸ ಮಾಡುತ್ತಿದೆ’ ಎಂದರು.

ಎಸ್‌ಸಿ ಮೋರ್ಚಾ ತಾಲ್ಲೂಕು ಉಪಾಧ್ಯಕ್ಷೆ ಲಕ್ಷ್ಮೀ ಉಮೇಶ್‌,‘ಅಂಬೇಡ್ಕರ್‌ ಅವರಂತೆ ಸಮುದಾಯದ ಯುವಕರು ಹೆಚ್ಚು ವಿದ್ಯಾರ್ಹತೆ ಹೊಂದಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್‌ ಪ್ರಾಸ್ತಾವಿಕವಾಗಿಮಾತನಾಡಿದರು.

ಬಿಜೆಪಿ ಎಸ್‌ಸಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್‌ ಅಕ್ಕಸಾಲಮಕ್ಕಿ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಎನ್.‌ ವೆಂಕಟೇಶ್‌, ತಾಲ್ಲೂಕು ಉಪಾಧ್ಯಕ್ಷೆ ಲಕ್ಷ್ಮೀ ಉಮೇಶ್‌, ಮಂಡಲ ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಮಾತನಾಡಿದರು.

ಬಿಜೆಪಿ ಮುಖಂಡರಾದ ಬೇಗುವಳ್ಳಿ ಸತೀಶ್‌, ಆರ್.‌ ಮದನ್‌, ಸಾಲೇಕೊಪ್ಪ ರಾಮಚಂದ್ರ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ನೀಲಮ್ಮ ಸತೀಶ್‌, ಕೊಲ್ಲಣ್ಣ ಕಲ್ಗುಡ್ಡ, ಲಿಂಗರಾಜ್, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.