ಆನವಟ್ಟಿ: ‘ಶಾಲೆಯಿಂದ ಹೊರಗುಳಿದ ಮಕ್ಕಳು ಅಸುರಕ್ಷಿತವಾಗಿರಲು ಸಾಮಾಜಿಕ ಜಾಲತಾಣ ಮತ್ತು ವಿಭಕ್ತ ಕುಟುಂಬಗಳು ಕಾರಣ. ಹೀಗಾಗಿ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವುದು ಸುರಕ್ಷಿತ’ ಎಂದು ತಾಲ್ಲೂಕು ಪಂಚಾಯಿತಿ ಇಒ ಶಶಿಧರ್ ಅಭಿಪ್ರಾಯ ಪಟ್ಟರು.
ಸಾಲಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಡೆ ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಮಕ್ಕಳ ವಿಶೇಷ ಗ್ರಾಮ ಸಭೆ ಹಾಗೂ ಮಹಿಳಾ ಗ್ರಾಮ ಸಭೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆ ಮೊಬೈಲ್ ಬಳಕೆ ಇಲ್ಲದೆ, ಅವಿಭಕ್ತ ಕುಟುಂಬ ಸಂಖ್ಯೆ ಹೆಚ್ಚಾಗಿದ್ದ ಕಾಲದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ತೀರಾ ಕಡಿಮೆ ಇದ್ದವು. ಮಕ್ಕಳು ಸುರಕ್ಷಿತವಾಗಿ ಇರುತ್ತಿದ್ದರು. ಈಗ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣ ಎಲ್ಲರನ್ನೂ ಆವರಿಸಿದೆ. ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗಿವೆ. ತಂದೆ– ತಾಯಿ ಕೆಲಸದ ನಿಮಿತ್ತ ಹೊರಗೆ ಹೋದರೆ ಮನೆಯಲ್ಲಿರುವ ಮಕ್ಕಳ ಸುರಕ್ಷತೆ ಇಲ್ಲದಂತಾಗಿದೆ. ಹಾಗಾಗಿ, ಮಕ್ಕಳನ್ನು ಮನೆಯಲ್ಲಿ ಇರಿಸದೆ ಶಾಲೆಗೆ ಕಳುಹಿಸಿ. ಮಕ್ಕಳಿಗೆ ಸುರಕ್ಷತೆ ಸಿಗುತ್ತದೆ’ ಎಂದು ಹೇಳಿದರು.
‘ಸರ್ಕಾರದ ಮಿಶನ್ ಸುರಕ್ಷಾ ಯೋಜನೆ ಅಡಿಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು, ಮರಳಿ ಶಾಲೆಗೆ ತರುವುದು, ಒಂಟಿ ಪೋಷಕರ ಮಕ್ಕಳ ಸಂಖ್ಯೆ ಗುರುತಿಸುವುದು. ಅನಾಥ ಮಕ್ಕಳ ಸಂಖ್ಯೆ ಗುರುತಿಸುವುದು. ದೌರ್ಜನ್ಯಕ್ಕೆ ಒಳಗಾದ ಮಕ್ಕಳನ್ನು ಗುರುತಿಸುವುದು ಮತ್ತು ಅವರಿಗೆ ಸುರಕ್ಷತೆ, ಮಹಿಳಾ ದೌರ್ಜನ್ಯ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಪೋಷಕರು ಹೆಣ್ಣುಮಕ್ಕಳ ಮೇಲೆ ಸದಾ ನಿಗಾ ಇರಿಸಬೇಕು. ಹೆಚ್ಚಾಗಿ ಮೊಬೈಲ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಬೇಕು. ಬೆದರಿಕೆ ಕರೆಗಳು ಅಥವಾ ಅನಾಮದೇಯ ವ್ಯಕ್ತಿಗಳು ಕಿರುಕಳ ಅಥವಾ ದೌರ್ಜನ್ಯ ನಡೆಸಿದರೆ ಪೊಲೀಸ್ ಠಾಣೆಗೆ ಪೋಕ್ಸೊ ಕಾಯ್ದೆ ಅಡಿ ದೂರು ದಾಖಲಿಸಿ ಕಾನೂನು ಸುರಕ್ಷತೆ ಪಡೆಯಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪುಷ್ಪಾ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮಿತ್ ರಾಜ್, ಮುಖ್ಯಶಿಕ್ಷಕ ಆರ್. ಗಿರಿಧರ್ ರಾಯ್ಕರ್, ಪಿಡಿಒ ಚಿದಾನಂದ, ಎಸ್‌ಡಿಎಂಸಿ ಅಧ್ಯಕ್ಷ ಗದಿಗೆಪ್ಪ, ತಾಲ್ಲೂಕು ಸುಧಾರಣ ಸಮಿತಿ ಸದಸ್ಯ ಶಿವಮೂರ್ತಿ, ಸಮನ್ವಯಾಧಿಕಾರಿ ದಯಾನಂದ್ ಕಲ್ಲೇರ್, ಸಿಆರ್‌ಪಿ ರಾಜು ಗಂಜೇರ್, ಸಾಮಾಜಿಕ ಕಾರ್ಯಕರ್ತರಾದ ಪುನೀತ್ ಕುಮಾರ್, ಮಧುಕುಮಾರ್, ಮುಖಂಡರಾದ ಅಶೋಕ್, ರಾಜಶೇಖರ್ ಸ್ವಾಮಿ, ಪರಶುರಾಮ್, ಜಿಎಂಎಚ್‌ಪಿಎಸ್ ಮುಖ್ಯ ಶಿಕ್ಷಕ ರಾಜಶೇಖರ್, ಗಣಪತಿ, ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.