ADVERTISEMENT

ಸೊರಬ | ಹೆಚ್ಚುತ್ತಿದೆ ಪ್ರಾಣಿ ವಧೆ: ಮಲಿನಗೊಳ್ಳುತ್ತಿದೆ ಚಂದ್ರಗುತ್ತಿ

ರಾಘವೇಂದ್ರ ಟಿ.
Published 24 ನವೆಂಬರ್ 2023, 7:38 IST
Last Updated 24 ನವೆಂಬರ್ 2023, 7:38 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದ ರಥ ಬೀದಿ ಸಮೀಪ ಅಡುಗೆ ಮಾಡುತ್ತಿರುವುದು
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದ ರಥ ಬೀದಿ ಸಮೀಪ ಅಡುಗೆ ಮಾಡುತ್ತಿರುವುದು   

ಸೊರಬ: ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಭಕ್ತರು ಎಲ್ಲೆಂದರಲ್ಲಿ ನಡೆಸುತ್ತಿರುವ ಪ್ರಾಣಿ ಬಲಿ, ಇದರಿಂದ ನಿತ್ಯ ಕ್ಷೇತ್ರಕ್ಕೆ ಬರುವ ಯಾತ್ರಿಕರಿಗೆ ಮುಜುಗರ ಮಾತ್ರವಲ್ಲದೆ ಮೂಲ ಸೌಕರ್ಯಗಳ ಕೊರತೆ.

ಜಿಲ್ಲೆಯಲ್ಲದೆ ರಾಜ್ಯದಾದ್ಯಂತ ಅಪಾರ ಭಕ್ತರನ್ನು ಹೊಂದಿರುವ, ಇತಿಹಾಸ ಪ್ರಸಿದ್ಧ ಚಂದ್ರಗುತ್ತಿಯ ರೇಣುಕಾಂಬಾ ದೇವಿ ದೇವಸ್ಥಾನದ ಸದ್ಯದ ಸ್ಥಿತಿ ಇದು.

ಮಂಗಳವಾರ, ಶುಕ್ರವಾರ ಸೇರಿದಂತೆ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಮಲೆನಾಡು ಹಾಗೂ ಬಯಲುಸೇಮೆಯ ಶಿವಮೊಗ್ಗ, ದಾವಣಗೆರೆ , ರಾಯಚೂರು, ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತರು ದೇವಿಗೆ ಹರಕೆ ರೂಪದಲ್ಲಿ ಕುರಿ, ಕೋಳಿಗಳನ್ನು ರಥಬೀದಿಯ ಇಕ್ಕೆಲಗಳಲ್ಲಿ ಬಲಿ ಕೊಡುತ್ತಿರುವುದು ಸಾಮಾನ್ಯವಾಗಿದೆ.

ADVERTISEMENT

ದೇವಸ್ಥಾನದ ಆವರಣದಲ್ಲಿ ನಿಗದಿತ ಸ್ಥಳವಿಲ್ಲದ ಪರಿಣಾಮ ಎಲ್ಲೆಂದರಲ್ಲಿ ಕುರಿ, ಕೋಳಿ ಬಲಿ ಕೊಡುವುದರಿಂದ ಇಡೀ ಕ್ಷೇತ್ರ ಮಲೀನಗೊಳ್ಳುತ್ತಿದೆ. ಧಾರ್ಮಿಕ ವಿಧಿ, ವಿಧಾನಗಳನ್ನು ನಡೆಸಲು ಅಡ್ಡಿಯಾಗಿದೆ ಎನ್ನುವ ಭಾವನೆ ಗ್ರಾಮಸ್ಥರದ್ದಾಗಿದೆ. ಬಹುತೇಕ ಭಕ್ತರು ದವಸ, ಧಾನ್ಯಗಳಿಗಿಂತ ಹೆಚ್ಚಾಗಿ ಪ್ರಾಣಿಗಳನ್ನು ಹರಕೆ ಹೊತ್ತುಕೊಳ್ಳುತ್ತಾರೆ. ಅಲ್ಲದೆ, ಬಹುತೇಕರು ದೇವಿಯ ಸನ್ನಿಧಿಯಲ್ಲಿ ಹರಕೆ ತೀರಿಸುವ ಪದ್ಧತಿಯನ್ನು ತಲೆತಲಾಂತರದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿದ್ದರೂ ಬದಲಿ ವ್ಯವಸ್ಥೆ ಕಲ್ಪಿಸಿಲ್ಲ. ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನದ ಮುಜರಾಯಿ ಇಲಾಖೆಗೆ ಒಳಪಡುತ್ತದೆ. ಕಾಣಿಕೆ ರೂಪದಲ್ಲಿ ಪ್ರತಿ ತಿಂಗಳು ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗುತ್ತದೆ. ಆದರೆ, ಭಕ್ತರಿಗೆ ವ್ಯವಸ್ಥಿತ ಮೂಲ ಸೌಲಭ್ಯ ಕಲ್ಪಿಸದ ಕಾರಣ ಎಲ್ಲೆಂದರಲ್ಲಿ ಬೀಡು ಬಿಡುವ ಭಕ್ತರು ಪ್ರಾಣಿಗಳ ವಧೆ ನಡೆಸುವ ಜೊತೆಗೆ ಅಡುಗೆ ಮಾಡಿದ ಸ್ಥಳದಲ್ಲಿಯೇ ತ್ಯಾಜ್ಯಗಳನ್ನು ಬಿಸಾಡುವುದರಿಂದ ಸಾರ್ವಜನಿಕ, ಜನ ವಸತಿ ಮತ್ತು ಸಂತೆ ಮಾರುಕಟ್ಟೆ ಸ್ಥಳಗಳು ಮಲೀನವಾಗಿ ದುರ್ವಾಸನೆ ಬೀರುತ್ತಿವೆ.

ಜೊತೆಗೆ ರೋಗ–ರುಜಿನ ಹರಡುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಎರಡು– ಮೂರು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಹಾಗೂ ತಾಲ್ಲೂಕು ದಂಡಾಧಿಕಾರಿ ಆದೇಶದ ಮೇರೆಗೆ ‘ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದೆ’ ಎಂದು ರಥ ಬೀದಿಯಲ್ಲಿ ಸೂಚನಾ ಫಲಕಗಳನ್ನು ಆಳವಡಿಸಲಾಗಿತ್ತು. ಆದರೆ, ಭಕ್ತರು ವ್ಯವಸ್ಥಿತ ಸ್ಥಳವಿಲ್ಲದ ಕಾರಣ ರಥ ಬೀದಿ ಮತ್ತು ಸಾರ್ವಜನಿಕ ಇತರೆ ಸ್ಥಳಗಳಲ್ಲಿ ಬಲಿ ಸಮರ್ಪಿಸುತ್ತಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.

ಲಕ್ಷಾಂತರ ಭಕ್ತರು ಬಂದು ಹೋಗುವ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರೇಣುಕಪ್ರಸಾದ್
ರಥ ಬೀದಿಯಲ್ಲಿ ಪ್ರಾಣಿ ವಧೆ ಮಾಡದಂತೆ ಆದೇಶಿಸಲಾಗಿದೆ. ಸಿಬ್ಬಂದಿ ನೇಮಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕ್ಷೇತ್ರದ ಹಿರಿಮೆಗೆ ಭಕ್ತರ ಸಹಕಾರ ಮುಖ್ಯ.
ಶಿವಪ್ರಸಾದ್ ಕಾರ್ಯ ನಿರ್ವಹಣಾಧಿಕಾರಿ ರೇಣುಕಾಂಬಾ ದೇವಸ್ಥಾನ
ವ್ಯವಸ್ಥೆ ಕಲ್ಪಿಸಿ; ದರ ನಿಗದಿ ಪಡಿಸಿ
ಮಾರುಕಟ್ಟೆಗೆ ತಂತಿ ಬೇಲಿ‌ ಅಳವಡಿಸಿದ್ದರೂ ಭಕ್ತರು ರಾತ್ರಿ ವೇಳೆ ಬೇಲಿ ಕಿತ್ತು ಅಡುಗೆ ಮಾಡಿ ಗಲೀಜು ಮಾಡಿದ್ದಾರೆ. ಕಂದಾಯ ಇಲಾಖೆಯವರು ಜಾಗ ಗುರುತಿಸಿ ಕುರಿ ಕೋಳಿ ಕತ್ತರಿಸಲು ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿ ದರ ನಿಗದಿಪಡಿಸಿದರೆ ಇಲಾಖೆಗೆ ಆದಾಯ ಬರುವ ಜೊತೆಗೆ ಗ್ರಾಮ ಸ್ವಚ್ಛವಾಗಿರುತ್ತದೆ. ಸಂಬಂಧಪಟ್ಟವರು ಗಮನ ನೀಡಬೇಕು. ರೇಣುಕಪ್ರಸಾದ್ ಉಪಾಧ್ಯಕ್ಷ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.