
ತೀರ್ಥಹಳ್ಳಿ : ಶಾಸಕ ಆರಗ ಜ್ಞಾನೇಂದ್ರ ಪುತ್ರ, ಪುತ್ರಿ, ತಮಿಳುನಾಡಿನಲ್ಲಿ ಡಿಸಿಎಫ್‌ಓ ಅಧಿಕಾರಿ ಆಗಿರುವ ಅಳಿಯನ ಹೆಸರಲ್ಲಿ ಮಾಡಿರುವ ಆಸ್ತಿ ಮಾಹಿತಿ ಲಭ್ಯವಾಗಿದ್ದು ಆಸ್ತಿ ಶೀಘ್ರ ಬಿಡುಗಡೆ ಮಾಡುತ್ತೇನೆ. ಅವರ ತಪ್ಪು ಮುಚ್ಚಲು ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಡಿ.ಎಸ್.ವಿಶ್ವನಾಥ ಶೆಟ್ಟಿ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಷೇತ್ರದ ಶಾಸಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್ ಈವರೆಗೂ ಯಾವುದೇ ಪ್ರತಿಭಟನೆ ತೋರಿಲ್ಲ. 13 ವರ್ಷದಿಂದ ಅಧ್ಯಕ್ಷರಾಗಿರುವ ಅವರು ಪಕ್ಷ ಸಂಘಟನೆಯಲ್ಲಿ ಅಸಮರ್ಥರಾಗಿದ್ದಾರೆ. ಪಕ್ಷದ ಹಿತಕ್ಕಾಗಿ ಅವರನ್ನು ತಕ್ಷಣ ಹುದ್ದೆಯಿಂದ ಬಿಡುಗಡೆ ಮಾಡಬೇಕು ಎಂದು ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದರು.
ಪಕ್ಷದ ಸಂವಿಧಾನದ ಅನ್ವಯ 3 ವರ್ಷಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಬದಲಾಗಬೇಕು. ಕೆಸ್ತೂರು ಮಂಜುನಾಥ್ 13 ವರ್ಷದಿಂದ ಹುದ್ದೆಯಲ್ಲಿರುವುದು ಸಮರ್ಥನೀಯ ವಿಷಯವಲ್ಲ. ಶಾಸಕ ಆರಗ ಜ್ಞಾನೇಂದ್ರ ಮಾಡುತ್ತಿರುವ ಸೇಡಿನ ರಾಜಕಾರಣ ವಿರೋಧಿಸಿ ಈವರೆಗೂ ಒಂದೇ ಒಂದು ಪತ್ರಿಕಾ ಹೇಳಿಕೆ ನೀಡಿಲ್ಲ. ಸಾರ್ವಜನಿಕ ಸಭೆಯಲ್ಲಿ ಟೀಕೆಯನ್ನು ಮಾಡಿಲ್ಲ. ಇಂತಹ ಅಸಮರ್ಥ ಪಕ್ಷದ ಅಧ್ಯಕ್ಷರಾಗಿರುವುದು ಸರಿಯಲ್ಲ ಎಂದರು.
ದಬ್ಬಣಗದ್ದೆ ಗ್ರಾಮದಲ್ಲಿ ಕೆಸ್ತೂರು ಮಂಜುನಾಥ್ 10 ಎಕರೆ ಅವರ ತಂದೆ ದುಗ್ಗಪ್ಪಗೌಡ 15 ಎಕರೆ ಜಮೀನು ಕಾನೂನು ಬಾಹಿರವಾಗಿ ಹೊಂದಿದ್ದಾರೆ ಎಂದು ಆರಗ ಆರೋಪ ಮಾಡಿದ್ದಾರೆ. ಆಸ್ತಿ ಹೇಗೆ ಬಂತು ಎಂಬ ವಿಷಯವನ್ನು ಜನರಿಗೆ ತಿಳಿಸುವ ಪ್ರಯತ್ನ ಕೆಸ್ತೂರು ಮಾಡಿಲ್ಲ. ಶಾಸಕರನ್ನು ಕಂಡರೆ ಕೆಸ್ತೂರು ಮಂಜುನಾಥ್ ಹೆದರುತ್ತಾರೆ. ಇಂತವರು ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಧಾವಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪಕ್ಷದ ನಾಯಕತ್ವ ಹೊಂದಿರುವ ಕಿಮ್ಮನೆ ರತ್ನಾಕರ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಕ್ರಮಕ್ಕೆ ವಿರೋಧ ಇದೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಅವರ ಕಿವಿ ಹಿಂಡುವ ಜವಾಬ್ದಾರಿಯನ್ನು ಅನಿವಾರ್ಯವಾಗಿ ಈಗ ನಿರ್ವಹಿಸಬೇಕಾಗಿದೆ. ತಪ್ಪು, ಸರಿ ಯಾವುದು ಎಂದು ಗಮನಿಸಿ ಪಕ್ಷದ ಚೌಕಟ್ಟಿನಲ್ಲಿ ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿಲ್ಲ. ಆರಗ ಜ್ಞಾನೇಂದ್ರ ಮಾಡುತ್ತಿರುವ ಟೀಕೆಗೆ ಹೆದರಿ ಪಕ್ಷದ ಕಾರ್ಯಕರ್ತರನ್ನು ಕಿಮ್ಮನೆ ಕೈ ಬಿಡುತ್ತಿದ್ದಾರೆ ಎಂದು ದೂರಿದರು.
ಪಟ್ಟಣ ಪಂಚಾಯಿತಿ ಸದಸ್ಯ ಟಿ.ರಹಮತ್ ಉಲ್ಲಾ ಅಸಾದಿ, ಸುಶೀಲ ಶೆಟ್ಟಿ, ಹಾರೋಗೊಳಿಗೆ ವಿಶ್ವನಾಥ್, ಬೆಟ್ಟಮಕ್ಕಿ ನಾಗರಾಜ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವರಲಕ್ಷ್ಮೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.