ADVERTISEMENT

ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ: ಕಿಮ್ಮನೆ ರತ್ನಾಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮೇ 2022, 3:11 IST
Last Updated 4 ಮೇ 2022, 3:11 IST
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ   

ತೀರ್ಥಹಳ್ಳಿ: ಪಿಎಸ್‌ಐ ನೇಮಕಾತಿ ಹಗರಣ ಅಧಿವೇಶನದಲ್ಲಿ ಪ್ರಸ್ತಾಪವಾಗಿದೆ. ಆರಗ ಜ್ಞಾನೇಂದ್ರ ಆರಂಭದಲ್ಲಿಯೇ ಎಡವಿದ್ದಾರೆ. ಆರೋಪ ಹೊತ್ತು ತನಿಖೆ ನಡೆಸುವುದು ಕಾನೂನು ಪ್ರಕಾರ ಅಪರಾಧ. ರಾಜೀನಾಮೆ ನೀಡಿ ಪ್ರಮಾಣಿಕತೆ ಪ್ರದರ್ಶಿಸಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆಗ್ರಹಿಸಿದರು.

ಪಟ್ಟಣದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಜನ ಸಾಮಾನ್ಯರಿಗೆ ಉಪಯೋಗವಾಗುವ ಯಾವುದೇ ಕೆಲಸ ಮಾಡುತ್ತಿಲ್ಲ. ರಾಜ್ಯ ಸರ್ಕಾರ ವಿಸರ್ಜಿಸಿ ಚುನಾವಣೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಬಿಜೆಪಿ ಸರ್ಕಾರದ ಎಲ್ಲಾ ಅಕ್ರಮಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ ಮೇ 6ರಿಂದ 10ರ ವರೆಗೆ ಬೃಹತ್‌ ಪಾದಯಾತ್ರೆ ಚಳವಳಿ ಹಮ್ಮಿಕೊಂಡಿದ್ದೇವೆ. ಗೃಹಸಚಿವರ ತವರೂರು ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಿಂದ ಮೌನ ಪ್ರತಿಭಟನೆ ಹೊದಲ ಮಾರ್ಗವಾಗಿ ಬೆಜ್ಜವಳ್ಳಿ, ಮಂಡಗದ್ದೆ, ಸಕ್ರೆಬೈಲು, ಶಿವಮೊಗ್ಗದ ಹರಕೆರೆ ತಲುಪಲಿದೆ. 10ರಂದು ಶಿವಮೊಗ್ಗದ ಪ್ರತಿಭಟನಾ ಸ್ಥಳ ತಲುಪುತ್ತೇವೆ’ ಎಂದು ತಿಳಿಸಿದರು.

ADVERTISEMENT

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಕೆಪಿಸಿಸಿ ಸದಸ್ಯ ಜಿ.ಎಸ್.‌ ನಾರಾಯಣ ರಾವ್‌, ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ಕೆಸ್ತೂರು ಮಂಜುನಾಥ್‌, ಐವೈಸಿ ವಕ್ತಾರ ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಮುಖಂಡರಾದ ವಿಲಿಯಂ ಮಾರ್ಟಿಸ್‌, ಮಂಜುನಾಥ್‌, ಡಿ. ಲಕ್ಷ್ಮಣ ಇದ್ದರು.

‘ಆರಗ ರಾಜಕೀಯ ನಿವೃತ್ತಿ ಘೋಷಿಸಲಿ’

ಅಂಬುತೀರ್ಥ ಬಳಿ ನಡೆದ ಶೂಟೌಟ್‌ ಪ್ರಕರಣದ ಮೃತ ಕಾಂತರಾಜ್‌ ಕುಟುಂಬದ ನೆರವಿಗಾಗಿ ₹ 28 ಲಕ್ಷ ಹಣ ಸಂಗ್ರಹಿಸಲಾಗಿದೆ. ₹ 10 ಲಕ್ಷ ಕೇಸ್‌ ಮುಚ್ಚಿಹಾಕಲು ಪೊಲೀಸ್‌ ಇಲಾಖೆಗೆ, ₹ 10 ಲಕ್ಷ ಕಾಂತರಾಜ್‌ ಕುಟುಂಬಕ್ಕೆ, ಉಳಿದ ₹ 8 ಲಕ್ಷ ಗೋವಿಂದನ ಲೆಕ್ಕಕ್ಕೆ ಎಂಬ ಮಾಹಿತಿ ಇದೆ. ಹಣದ, ಸೇಡಿನ ರಾಜಕಾರಣ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರನ್ನು ದಿಕ್ಕು ಕೆಡಿಸಿದೆ. ಜ್ಞಾನೇಂದ್ರ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ತಾಲ್ಲೂಕು ಕಾಂಗ್ರೆಸ್‌ ವಕ್ತಾರ ವಿಶ್ವನಾಥ ಶೆಟ್ಟಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.