ಶಿವಮೊಗ್ಗ: ‘ರೈತರು ಅಡಿಕೆ ಬೆಳೆಯೊಂದನ್ನೇ ನಂಬಿಕೊಂಡು ಕೃಷಿ ಮಾಡಬಾರದು. ಇಲ್ಲಿ ಹೆಚ್ಚಿನ ಆದಾಯ ತಂದುಕೊಡುವ ತಾಳೆ ಹಾಗೂ ರಬ್ಬರ್ ಬೆಳೆಯನ್ನೂ ಬೆಳೆಯಲು ಮುಂದಾಗಬೇಕು. ಇದರಿಂದ, ಲಾಭ ಪಡೆಯಲು ಸಾಧ್ಯ’ ಎಂದು ಪ್ರಗತಿಪರ ರೈತ ಈರಪ್ಪ ನಾಯ್ಕ ಸಲಹೆ ನೀಡಿದರು.
ಮಹಾನಗರ ಪಾಲಿಕೆಯಿಂದ ಇಲ್ಲಿನ ಕುವೆಂಪು ರಂಗಮಂದಿರಲ್ಲಿ ಗುರುವಾರ ಆಯೋಜಿಸಿದ್ದ ರೈತ ದಸರಾದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಲೆನಾಡಿನಲ್ಲಿ ಶೇ 50 ರಷ್ಟು ಅಡಿಕೆ ಬೆಳೆ ನಾಶವಾಗಿದೆ. ಅಡಿಕೆಗೆ ಬಹುತೇಕ ಕೊಳೆ ಹಾಗೂ ಇನ್ನಿತರ ರೋಗಗಳು ಬಾಧಿಸುತ್ತಿವೆ. ಇದರಿಂದ ಔಷಧಿ ಅಂಗಡಿಗಳಿಗೆ ಲಾಭ ಆಗುತ್ತಿದೆಯೇ ವಿನಃ ರೈತರಿಗೆ ಯಾವುದೇ ಲಾಭ ಆಗುತ್ತಿಲ್ಲ. ನನಗೆ ವಯಸ್ಸು 74 ವರ್ಷ. ಈಗಲೂ ಕೃಷಿಯಲ್ಲಿ ಆಸಕ್ತಿ ಕುಂದಿಲ್ಲ’ ಎಂದರು.
‘ರೈತರು ಯಾವುದೇ ಬೆಳೆ ಬೆಳೆದರೂ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಆದರೆ, ನಾನು ಪೂರ್ಣಾವಧಿ ಬೆಳೆಯಾಗಿ ತಾಳೆ, ರಬ್ಬರ್, ಅಡಿಕೆ, ಭತ್ತ, ಶುಂಠಿ, ಮೆಣಸು, ಕಬ್ಬು, ಏಲಕ್ಕಿ ಬೆಳೆಯೊಂದಿಗೆ ಕೊಬ್ಬರಿ ಎಣ್ಣೆ ತಯಾರಿಕೆಯ ಸಂಸ್ಕರಣಾ ಘಟಕ ಹಾಗೂ ಸಿಮೆಂಟ್ ಕಿಟಕಿ, ಬಾಗಿಲು ಕೂಡ ತಯಾರಿಸುತ್ತೇನೆ. ಇದರಿಂದ, ಲಾಭ ಗಳಿಸುತ್ತಿದ್ದೇನೆ’ ಎಂದರು.
‘ಸೊರಬ ತಾಲ್ಲೂಕಿನ ಚಂದ್ರಗುತ್ತಿ ಹೋಬಳಿಯ ಹೊರಬೈಲು ಗ್ರಾಮದಲ್ಲಿ ಜನಿಸಿ 1982ರಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೃಷಿಯಲ್ಲಿ ಹೊಸ ತಳಿಗಳು, ಬೆಳೆಗಳನ್ನು ಬೆಳೆದು ರೈತರಿಗೆ ಮಾದರಿ ಆಗಬೇಕು ಎನ್ನುವುದು ಉದ್ದೇಶವಾಗಿತ್ತು. ಅದೇ ಮಾದರಿಯಲ್ಲಿ ಕೃಷಿ ಮಾಡುತ್ತಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದರು.
‘ರೈತ ದಸರಾಗೆ ಕರೆಕೊಟ್ಟಾಗ ಜಿಲ್ಲೆಯ ರೈತರು, ಗ್ರಾಮಾಂತರ ಭಾಗದ ಕಲಾ ತಂಡಗಳು, ಜನಪದ ಕಲಾವಿದರು ಭಾಗವಹಿಸಬೇಕು. ಇಂತಹ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶಿಸಬೇಕು. ಇದರಿಂದ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬಹುದು’ ಎಂದು ರೈತ ನಾಯಕ ಕೆ.ಟಿ.ಗಂಗಾಧರ್ ತಿಳಿಸಿದರು.
‘ದೇಶದ ಬೆನ್ನೆಲುಬಾಗಿ ರೈತರು ನಿಂತಿದ್ದಾರೆ. ಇವರನ್ನು ಉಳಿಸಿಕೊಳ್ಳಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲವಾಗಿದೆ. ಸರ್ಕಾರ ಕೂಡ ಈ ಬಗ್ಗೆ ಚಿಂತಿಸಬೇಕಿದೆ’ ಎಂದು ಶಾಸಕ ಎಸ್. ಎನ್.ಚನ್ನಬಸಪ್ಪ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಆರ್.ಸಿ. ಜಗದೀಶ್, ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ನಾಗರಾಜ್ ಅಡಿವೆಪ್ಪನವರ್, ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ, ಪಾಲಿಕೆ ನೌಕರರ ಸಂಘ ಅಧ್ಯಕ್ಷ ಗೋವಿಂದ, ರೈತ ದಸರಾ ಕಾರ್ಯದರ್ಶಿ ವಿಕಾಸ್, ಪ್ರಮುಖರಾದ ಧೀರರಾಜ ಹೊನ್ನವಿಲೆ, ಇ. ವಿಶ್ವಾಸ್ ಇದ್ದರು.
ಜಾಥಾಗೆ ರೈತ ಮಹಿಳೆ ಕಮಲಮ್ಮ ಚಾಲನೆ
ಶಿವಮೊಗ್ಗ: ದಸರಾ ಅಂಗವಾಗಿ ಇಲ್ಲಿನ ಸೈನ್ಸ್ ಮೈದಾನದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ರೈತ ದಸರಾ ಜಾಥಾಗೆ ಪ್ರಗತಿಪರ ರೈತ ಮಹಿಳೆ ಕಮಲಮ್ಮ ಚಾಲನೆ ನೀಡಿದರು. ಬಳಿಕ ಸೈನ್ಸ್ ಮೈದಾನದಿಂದ ಕುವೆಂಪು ರಂಗಮಂದಿರದ ವರೆಗೆ ಅಲಂಕೃತ ಎತ್ತಿನ ಗಾಡಿಗಳು ಟಿಲ್ಲರ್ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಹಸಿರು ಮೇಳೈಸಿತ್ತು. ಸುತ್ತಮುತ್ತಲಿನ ರೈತರು ಭಾಗಿಯಾಗಿ ಸಂಭ್ರಮಿಸಿದರು. ಡೊಳ್ಳು ಕುಣಿತದೊಂದಿಗೆ ನೂರಾರು ರೈತರು ಹಸಿರು ಟವೆಲ್ ಮತ್ತು ಬಿಳಿ ಪಂಚೆ ಧರಿಸಿ ದಸರಾಕ್ಕೆ ಮೆರುಗು ನೀಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಆಯುಕ್ತ ಕೆ.ಮಾಯಣ್ಣ ಗೌಡ ಸೇರಿದಂತೆ ಗಣ್ಯರು ಎತ್ತಿನ ಗಾಡಿಯಲ್ಲಿ ಬಂದಿದ್ದು ವಿಶೇಷವಾಗಿತ್ತು. ಮಹಿಳೆಯರು ಕೂಡ ಹಸಿರು ಸೀರೆ ಉಟ್ಟು ಎತ್ತಿನಗಾಡಿಯಲ್ಲಿ ಸಾಗಿದರು.
‘ರಬ್ಬರ್‌ನಿಂದ ಸ್ಥಿರ ಆದಾಯ’
‘ಕೃಷಿ ಪದ್ಧತಿಯಲ್ಲಿ ಬದಲಾವಣೆ ಆಗಬೇಕಿದೆ. 300 ರಬ್ಬರ್ ಮರಗಳಿಂದ ತಿಂಗಳಿಗೆ ₹60000 ಲಾಭ ಪಡೆಯಬಹುದು. ರಬ್ಬರ್ ಬೆಳೆ ಹೆಚ್ಚು ಶ್ರಮ ಬೇಡುವುದಿಲ್ಲ. ಇಲ್ಲಿ ರಬ್ಬರ್‌ಗೆ ರಾಸಾಯನಿಕ ಗೊಬ್ಬರದ ಅವಶ್ಯಕತೆ ಇಲ್ಲ. ದನ ಕುರಿ ಕೋಳಿಯ ಸಾವಯವ ಗೊಬ್ಬರ ಹಾಕಿ ಉತ್ತಮ ಇಳುವರಿ ಪಡೆಯಬಹುದು. ಇದರ ಜತೆ ಹೆಚ್ಚು ನೀರು ಕೂಡ ಈ ಬೆಳೆಗೆ ಬೇಡ. ಆದ್ದರಿಂದ ರೈತರು ತಾಳೆ ಹಾಗೂ ರಬ್ಬರ್ ಬೆಳೆಯಲು ಮುಂದಾಗಬೇಕು’ ಎಂದು ಪ್ರಗತಿಪರ ರೈತ ಈರಪ್ಪ ನಾಯ್ಕ ಮನವಿ ಮಾಡಿದರು.
‘ಕೃಷಿ ಜ್ಞಾನ ಭಂಡಾರ ಅಳಿಯದಿರಲಿ’
‘ದೇಶದ ಕೃಷಿ ಆತಂಕ ಸ್ಥಿತಿಯಲ್ಲಿದೆ. ಭೂಮಿಯ ಫಲವತ್ತತೆ ಕುಸಿಯುತ್ತಿದೆ. ಕೃಷಿಯ ಜ್ಞಾನ ಭಂಡಾರ ಬಿತ್ತನೆ ಬೀಜ ಕೃಷಿ ಭೂಮಿ– ಇವು ಕೈಬಿಟ್ಟು ಹೋಗುವಂತಹ ದಿನಗಳು ಹತ್ತಿರ ಇವೆ. ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಕೃಷಿಯನ್ನು ಬಂಡವಾಳ ಮಾಡಿಕೊಳ್ಳುತ್ತಿವೆ. ಆದ್ದರಿಂದ ಕೃಷಿಯ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸಬೇಕು’ ಎಂದು ರೈತ ನಾಯಕ ಕೆ.ಟಿ.ಗಂಗಾಧರ್ ಅಭಿಪ್ರಾಯಪಟ್ಟರು.
‘ಕೃಷಿ ಅರಿವು ವಿಸ್ತರಿಸಲಿ’
‘ಈ ಹಿಂದೆ ರೈತರು ಯಾರ ಮೇಲೂ ಅವಲಂಬಿತ ಆಗಿರಲಿಲ್ಲ. ಯಂತ್ರಗಳೂ ಇರಲಿಲ್ಲ. ಸಾಲ ಮಾಡಿಕೊಂಡಿರಲಿಲ್ಲ. ಕೊಟ್ಟಿಗೆ ಗೊಬ್ಬರ ಇತ್ತು. ಮನೆಯಲ್ಲೇ ಎಲ್ಲ ಧಾನ್ಯಗಳ ಬೀಜ ಸಂಗ್ರಹ ಇತ್ತು. ಈಗ ಅದೆಲ್ಲವೂ ಮರೆಯಾಗಿದೆ. ಎತ್ತಿನ ಗಾಡಿ ನೇಗಿಲು ಕುಂಟೆ ಯಾವುದೂ ಕಾಣುತ್ತಿಲ್ಲ. ಮುಂದೊಂದು ದಿನ ಇವನ್ನೆಲ್ಲ ಮಕ್ಕಳಿಗೆ ಮ್ಯೂಸಿಯಂನಲ್ಲಿ ತೋರಿಸಬೇಕಾದ ಸ್ಥಿತಿ ಬರಲಿದೆ. ಹಾಲು ಕೂಡ ಡೇರಿಯಿಂದ ಬರುತ್ತದೆ ಎಂದು ಎಷ್ಟೋ ಮಕ್ಕಳು ಭಾವಿಸಿದ್ದಾರೆ. ಹಾಗಾಗಿ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಪೀಳಿಗೆಗೆ ನೀಡಬೇಕಿದೆ’ ಎಂದು ರೈತ ನಾಯಕ ಎಚ್.ಆರ್. ಬಸವರಾಜಪ್ಪ ಹೇಳಿದರು.
ಕಲಾ ದಸರಾಗೆ ಜಿಲ್ಲಾಧಿಕಾರಿ ಚಾಲನೆ
ಶಿವಮೊಗ್ಗ: ‘ನಾಡಹಬ್ಬ ಮೈಸೂರು ದಸರಾ ಮಾತ್ರ ಹೆಚ್ಚು ಪ್ರಚಲಿತ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಶಿವಮೊಗ್ಗ ದಸರಾ ಕೂಡ ಅತ್ಯಂತ ವಿಭಿನ್ನವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹರ್ಷ ವ್ಯಕ್ತಪಡಿಸಿದರು. ಇಲ್ಲಿನ ಶಿವಪ್ಪನಾಯಕ ಅರಮನೆಯಲ್ಲಿ ಕಲಾ ದಸರಾದ ಛಾಯಾಚಿತ್ರ ಪ್ರದರ್ಶನ ಚಿತ್ರಕಲಾ ಪ್ರದರ್ಶನ ಗೊಂಬೆ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಪ್ರವಾಸೋದ್ಯಮ ದಿನದ ಹಿನ್ನೆಲೆ ಛಾಯಾಚಿತ್ರ ಪ್ರದರ್ಶಿಸಲಾಗುತ್ತಿದೆ. ಮಕ್ಕಳು ಹೆಚ್ಚಾಗಿ ಉತ್ಸವದಲ್ಲಿ ಭಾಗವಹಿಸಬೇಕು’ ಎಂದರು. ‘ಶಿವಮೊಗ್ಗ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಮುಂದೆ ಮತ್ತಷ್ಟು ಯಶಸ್ವಿಯಾಗಿ ನಡೆಯಲಿದೆ. ದೈವ ಇಚ್ಛೆಯಿಂದ ನಾನು ನಾಲ್ಕನೇ ಬಾರಿ ಈ ದಸರಾದಲ್ಲಿ ಪಾಲ್ಗೊಂಡಿದ್ದೇನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು. ಅರಮನೆಯ ಮೇಲ್ಭಾಗದಲ್ಲಿ ಪೇಂಟಿಂಗ್ ಪ್ರದರ್ಶನ ಇದೆ. ಅರಮನೆ ಅವರಣದಲ್ಲಿ ರಾಧಿಕಾ ಜಗದೀಶ್ ಅವರು ದಸರಾ ಬೊಂಬೆಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಇದೇ ಮೊದಲ ಬಾರಿ ಗೊಂಬೆ ಪ್ರದರ್ಶನ ಇದ್ದು ಪಟ್ಟಣದ ಗೊಂಬೆ ಅರಮನೆ ಅಂಬಾರಿ ಚನ್ನಪಟ್ಟಣ ಗೊಂಬೆಗಳು ದಶಾವತಾರ ಅಷ್ಟಲಕ್ಷ್ಮಿ ನವದುರ್ಗೆ ರಾಮಮಂದಿರ ಕಾಡು ವನ್ಯಜೀವಿಗಳು ಪ್ರಾಣಿಗಳ ರಕ್ಷಣೆ ಫೈಬರ್ ಸರ್ಪವನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಶಾಸಕ ಎಸ್.ಎನ್.ಚನ್ನಬಸಪ್ಪ ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುಜೀಬ್ ಇದ್ದರು.
ನಗೆಹಬ್ಬ: ಮುಖ್ಯಮಂತ್ರಿ ಚಂದ್ರು ಭಾಗಿ
ಶಿವಮೊಗ್ಗ ದಸರಾ ಅಂಗವಾಗಿ ಸೆ.26ರಂದು ಬೆಳಿಗ್ಗೆ 8 ಗಂಟೆಗೆ ಎಟಿಎನ್‌ಸಿಸಿ ಕಾಲೇಜು ಆವರಣ ಹಾಗೂ ವಿನೋಬನಗರ ಎಪಿಎಂಸಿ ತರಕಾರಿ ಮಾರುಕಟ್ಟೆ ಹಿಂಭಾಗ ಮತ್ತು ಗೋಪಾಳದ ಕೊನೆಯ ಬಸ್ ನಿಲ್ದಾಣದಲ್ಲಿ ಲಾವಣಿ ಹಾಗೂ ಜಾನಪದ ಕಥೆಯಾಧರಿತ ‘ಹಲಗಲಿ’ ನಾಟಕ ಪ್ರದರ್ಶನಗೊಳ್ಳಲಿದೆ. ಬೆಳಿಗ್ಗೆ 10.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗಛಾಯಾಚಿತ್ರ– ರಂಗಪರಿಕರ ಪ್ರದರ್ಶನ ಇರಲಿದೆ. ಸಂಜೆ 5 ಗಂಟೆಗೆ ಸಿಟಿ ಸೆಂಟರ್ ಮಾಲ್‌ನಲ್ಲಿ ಟ್ಯಾಲೆಂಟ್ ಹಂಟ್ ಸ್ಪರ್ಧೆ ನಡೆಯಲಿದೆ. ಸಂಜೆ 5ಕ್ಕೆ ಶಿವಪ್ಪನಾಯಕ ಅರಮನೆಯಲ್ಲಿ ಕಲಾ ದಸರಾದ ನಗೆಹಬ್ಬವನ್ನು ಹಾಸ್ಯನಟ ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.