ADVERTISEMENT

ಬಾಲಕೃಷ್ಣರಾವ್‌ಗೆ ಅಕಾಡೆಮಿ ಪ್ರಶಸ್ತಿ

ಸಂಗೀತ ದಿಗ್ಗಜನ ಅರಸಿ ಬಂದ ಗೌರವ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 5:25 IST
Last Updated 12 ಸೆಪ್ಟೆಂಬರ್ 2021, 5:25 IST
ಬಾಲಕೃಷ್ಣರಾವ್
ಬಾಲಕೃಷ್ಣರಾವ್   

ಹೊಸನಗರ: ಗಾಯನ ಕ್ಷೇತ್ರಕ್ಕೆ ತಮ್ಮ ಸರ್ವಸ್ವವನ್ನು ಮುಡಿಪಾಗಿಟ್ಟ ಸಂಗೀತ ದಿಗ್ಗಜ ಎಚ್‌.ಕೆ. ಬಾಲಕೃಷ್ಣರಾವ್‌ ಸಾಧನೆಯನ್ನು ಸರ್ಕಾರ ಕೊನೆಗೂ ಗುರುತಿಸಿದೆ. ಕರ್ನಾಟಕ ಸಂಗೀತ ವಿಭಾಗದಲ್ಲಿ 2021–22ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗೆಬಾಲಕೃಷ್ಣರಾವ್‌ಭಾಜನರಾಗಿದ್ದಾರೆ.

ಹೊಸನಗರ ತಾಲ್ಲೂಕಿನ ನಗರ ನಿವಾಸಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ನಿವೃತ್ತ ಹೊಂದಿದ ಎಚ್‌.ಕೆ. ಬಾಲಕೃಷ್ಣರಾವ್‌ ಅವರು ಆರು ದಶಕಗಳಿಂದ ಸಂಗೀತ ಸೇವೆಸಲ್ಲಿಸುತ್ತಿದ್ದಾರೆ.

1940 ಅಕ್ಟೋಬರ್ 15ರಂದು ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆಯಲ್ಲಿ ಬಾಲಕೃಷ್ಣರಾವ್‌ ಜನಿಸಿದ್ದು, ಅವರ ತಂದೆ ಕೊಲ್ಲಪ್ಪಯ್ಯ, ತಾಯಿ ಕೊಲ್ಲೂರಮ್ಮ. ಕರ್ನಾಟಕ ಸಂಗೀತದಲ್ಲಿ ವಿದ್ವಾನ್ ಪದ್ಮನಾಭ ಭಟ್, ವಿದ್ವಾನ್ ಮುನಿ ವೆಂಕಟಪ್ಪ, ವಿದ್ವಾನ್ ಲಕ್ಷ್ಮಣ ಶಾಸ್ತ್ರಿ, ವಿದ್ವಾನ್ ನಾಗರಾಜ್ ಅವರಿಂದ ಜೂನಿಯರ್, ಸೀನಿಯರ್, ವಿದ್ವಾನ್ ವಿಭಾಗವನ್ನು ಮುಗಿಸಿದರು.

ADVERTISEMENT

ಬಳಿಕ ಸರ್ಕಾರಿ ಸಂಗೀತ ಶಿಕ್ಷಕರಾಗಿ 37 ವರ್ಷ ಕಾಲ ಸೇವೆ ಸಲ್ಲಿಸಿದ್ದರು.

ಎಚ್.ಕೆ. ಬಾಲಕೃಷ್ಣರಾವ್ ಅವರ ಸಂಗೀತ ಗರಡಿಯಲ್ಲಿ ಬೆಳೆದ ಹಲವಾರು ಸಂಗೀತ ಪ್ರತಿಭೆಗಳು ಇಂದು ರಾಜ್ಯಮಟ್ಟದಲ್ಲಿ ಹೆಸರು ಪಡೆದಿವೆ. ಸುಗಮ ಸಂಗೀತದಲ್ಲಿ ನಗರ ಶ್ರೀನಿವಾಸ ಉಡುಪ, ಗಾಯಕಿ ಅರ್ಚನಾ ಉಡುಪ, ಸಾಣೇಹಳ್ಳಿ ಮಠದ ಶಿವಸಂಚಾರದ ಗಾಯಕಿ ಬಿದನೂರು ಸಹೋದರಿಯರಾದ ಜ್ಯೋತಿ ಮತ್ತು ದಾಕ್ಷಾಯಿಣಿ, ಕಿಬೋರ್ಡ್ ವಾದಕ ಕೃಷ್ಣ ಉಡುಪ, ತಬಲ ವಾದಕ ನಾಗಭೂಷಣ ಉಡುಪ ಸೇರಿ ಹಲವರು ಇವರ ಶಿಷ್ಯರು.

‘ದೀರ್ಘಕಾಲದ ಸಂಗೀತ ಸೇವೆಗೆ ಸಂದ ಗೌರವ ಇದು. ಈಗಲಾದರೂ ಸರ್ಕಾರ ನನ್ನ ಕಲಾಸೇವೆಯನ್ನು ಗುರುತಿಸಿದೆ. ಪ್ರಶಸ್ತಿ ಖುಷಿ ತಂದಿದೆ. ಇಷ್ಟು ವರ್ಷ ಕಲಾಸೇವೆ ಮಾಡಿದ್ದಕ್ಕೆ ಸಾರ್ಥಕ ಭಾವ ಮೂಡಿದೆ’ ಎಂದು ಅವರು ಸಂತಸಹಂಚಿಕೊಂಡರು.

ಹೊಸನಗರದ ಸ್ಪೋರ್ಟ್ಸ್‌ ಅಸೋಸಿಯೇಶನ್‌ನಲ್ಲಿ 10 ವರ್ಷ ಸಂಗೀತ ಶಾಲೆಯನ್ನು ತೆರೆದು ಸಂಗೀತದ ಪಾಠ ಮಾಡಿದರು. ಜೀವನದ ಸಂಧ್ಯಾ ಕಾಲದಲ್ಲಿರುವ ಬಾಲಕೃಷ್ಣ ಅವರಿಗೆ ಪತ್ನಿ ಪ್ರೇಮಲೀಲಾ, ಪುತ್ರರಾದ ಸತೀಶ್, ರಾಜೇಶ್, ಪುತ್ರಿಯರಾದ ವಾಣಿ, ವೀಣಾ ಮತ್ತು ಮೊಮ್ಮಕ್ಕಳುಇದ್ದಾರೆ.

ತಾಲ್ಲೂಕಿನ ಹಿರಿಯ ತಲೆಮಾರಿನ ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲೊಬ್ಬರಾದ ಇವರಿಗೆ ತಡವಾಗಿಯಾದರೂ ಅಕಾಡೆಮಿ ಪ್ರಶಸ್ತಿ ಸಂದಿರುವುದು ತಾಲ್ಲೂಕಿಗೆ ಸಿಕ್ಕ ಹಿರಿಮೆ ಎನ್ನುವುದು ತಾಲ್ಲೂಕಿನ ಜನ‌‌ರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.