ಶಿವಮೊಗ್ಗ: ಇಲ್ಲಿನ ಚನ್ನಗಿರಿ ರಸ್ತೆಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಕಚೇರಿ ಆವರಣದಲ್ಲಿರುವ ಬೃಹದಾಕಾರದ ಕೆಲವು ಮರಗಳನ್ನು ಕಡಿದಿರುವ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಿಸಿಎಫ್‌ಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ವಾರದ ಹಿಂದೆ ಸಿಸಿಎಫ್ ಕಚೇರಿ ಆವರಣದಲ್ಲಿ ಸುಮಾರು 50 ವರ್ಷಗಳಷ್ಟು ಹಳೆಯದಾದ ಮೂರು ಮರಗಳನ್ನು ಕಡಿದು ಸಾಗಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನದೊಳಗೆ ಮಾಹಿತಿ ನೀಡುವಂತೆ ಅರಣ್ಯ ಸಚಿವರು ಸಿಸಿಎಫ್ ಕೆ.ಟಿ.ಹನುಮಂತಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಕಡಿದಿದ್ದು ಮಳೆ ಮರಗಳನ್ನು:
‘ಈಚೆಗೆ ಕಡಿದಿರುವುದು ಕಾಡು ಜಾತಿ ಮರಗಳನ್ನಲ್ಲ. ಬದಲಿಗೆ ಮಳೆ ಮರಗಳನ್ನು (Rain Tree). ಅಲಂಕಾರ, ನೆರಳಿಗಾಗಿ ಬೆಳೆಸುವ ಈ ಮರಗಳ ಟೊಂಗೆಗಳು ಮುರಿದು ಬಿದ್ದು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿದ್ದವು. ಮರ ಬಿದ್ದರೆ ಜೀವಕ್ಕೆ ಅಪಾಯ ಆಗುತ್ತಿತ್ತು. ನಿಯಮಾವಳಿ ಪ್ರಕಾರವೇ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಆ ಬಗ್ಗೆ ಅರಣ್ಯ ಸಚಿವರಿಗೆ ವರದಿ ಸಲ್ಲಿಸಲಾಗಿದೆ’ ಎಂದು ಹನುಮಂತಪ್ಪ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.