ಶಿವಮೊಗ್ಗ: ‘ಗಣತಿ ಕೇಂದ್ರ ಸರ್ಕಾರದ ಅಧಿಕಾರ ಎಂದು ಸಂವಿಧಾನದ ಏಳನೇ ಶೆಡ್ಯೂಲ್‌ನಲ್ಲಿ ಹೇಳಿದೆ. ಆದರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಮಾಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಹೀಗಾಗಿ ಸಮೀಕ್ಷೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ ಸಂಸದ ಬಿ.ವೈ.ರಾಘವೇಂದ್ರ ಅವರ ಹೇಳಿಕೆ ಹಾಸ್ಯಾಸ್ಪದ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೆ ಹೈಕೋರ್ಟ್ ಅದಕ್ಕೆ ತಡೆ ನೀಡುತ್ತಿತ್ತು. ಇಲ್ಲಿ ಜಾತಿ ಒಂದು ಅಂಶವೇ ಹೊರತು ಅದೇ ಪ್ರಧಾನವಲ್ಲ. ಸ್ವತಃ ಗೊಂದಲಕ್ಕೀಡಾಗಿರುವ ಸಂಸದರು, ಹೈಕೋರ್ಟ್ ಆದೇಶವನ್ನು ಪೂರ್ಣ ಅರ್ಥೈಸಿಕೊಳ್ಳದೇ ಅದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂದರು.
‘ಮಧು ಬಂಗಾರಪ್ಪ ಹಿಂದುಳಿದವರ ಕೋಟಾದಲ್ಲಿ ಮಂತ್ರಿ ಆಗಿದ್ದಾರೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ನೀಡಿರುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಆಯನೂರು ಮಂಜುನಾಥ್, ‘ಹಾಗಿದ್ದರೆ ಬಿಜೆಪಿಗಾಗಿ 25–30 ವರ್ಷಗಳ ಕಾಲ ದುಡಿದ ಹಿರಿಯರನ್ನು ಬಿಟ್ಟು ಸಹೋದರ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿರುವುದು ಯಾವ ಕೋಟಾ? ಅದು ಜಾತಿ ಕೋಟಾ ಇಲ್ಲವೇ ಯಡಿಯೂರಪ್ಪ ಅವರ ಕೋಟಾವೇ?’ ಎಂದು ಪ್ರಶ್ನಿಸಿದರು.
‘ಮಧು ಬಂಗಾರಪ್ಪ ಪಕ್ಷದ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರಾಗಿರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅವರ ಪಾಲು ದೊಡ್ಡದಿದೆ. ಸಮಾಜದ ರಚನೆಯ ಪ್ರಜ್ಞೆ, ನೇಯ್ಗೆ ಅದರ ಜಾತಿಯ ಎಳೆಗಳು ಹೇಗಿದ್ದಾವೆ ಎಂಬುದನ್ನು ಅರ್ಥೈಸಿಕೊಂಡಿರುವ ಕಾರಣಕ್ಕೆ ಅವರನ್ನು ಮಂತ್ರಿ ಮಾಡಿದ್ದಾರೆಯೇ ಹೊರತು ಜಾತಿ ಕೋಟಾದಲ್ಲಿ ಅಲ್ಲ. ಶಿಕಾರಿಪುರದಲ್ಲಿ ಸಾಮಾನ್ಯ ಪುರಸಭೆ ಸದಸ್ಯರಾಗಿದ್ದ ತಮಗೆ ಲೋಕಸಭೆ ಟಿಕೆಟ್ ಕೊಟ್ಟರಲ್ಲ ಅದು ಯಾವ ಕೋಟಾ? ಬೇರೆಯವರನ್ನು ಪ್ರಶ್ನಿಸುವಾಗ ತಮ್ಮ ಕೋಟಾ ಯಾವುದು ಎಂಬುದನ್ನು ಅರ್ಥೈಸಿಕೊಂಡು ಮಾತನಾಡಿ’ ಎಂದು ಸಲಹೆ ನೀಡಿದರು.
‘ಶರಾವತಿ, ಚಕ್ರಾ, ಸಾವೇಹಕ್ಕಲು ಯೋಜನೆಗಳ ಮುಳುಗಡೆ ಸಂತ್ರಸ್ತರಲ್ಲಿ ಹಿಂದುಳಿದ ವರ್ಗದವರೇ ಹೆಚ್ಚು. ಅವರ ಸಮಸ್ಯೆ ಇಲ್ಲಿಯವರೆಗೂ ಬಗೆಹರಿದಿಲ್ಲ. 20 ವರ್ಷಗಳ ಕಾಲ ಸಂಸದರಾಗಿದ್ದರೂ ಸಮಸ್ಯೆ ಪರಿಹರಿಸದ ಕಾರಣ ಬಿ.ವೈ.ರಾಘವೇಂದ್ರ ಹಿಂದುಳಿದ ವರ್ಗದವರ ವಿರೋಧಿ ಎಂದು ಮಧು ಬಂಗಾರಪ್ಪ ಸಹಜವಾಗಿಯೇ ಹೇಳಿಕೆ ನೀಡಿದ್ದಾರೆ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸಂತ್ರಸ್ತರ ಸಮಸ್ಯೆ ಪರಿಹರಿಸಲಿ’ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಎಸ್.ಟಿ. ಹಾಲಪ್ಪ, ರಮೇಶ್ ಶಂಕರಘಟ್ಟ, ಕಲಗೋಡು ರತ್ನಾಕರ್, ಶಿವುಕುಮಾರ್, ವೈ.ಎಚ್.ನಾಗರಾಜ್, ಜಿ.ಡಿ. ಮಂಜುನಾಥ್, ಶಿವಣ್ಣ, ಮಂಜುನಾಥ್ ಬಾಬು, ಸೈಯದ್ ವಾಹಿದ್ ಅಡ್ಡು, ಧೀರರಾಜ್ ಹೊನ್ನವಿಲೆ ಇದ್ದರು.
ಟೋಲ್‌ಗೇಟ್ ಸ್ಥಾಪಿಸಿ ಅದನ್ನು ಟೆಂಡರ್ ನೀಡಿದ ಬಿಜೆಪಿಯವರೇ ಈಗ ಟೋಲ್ ವಿರೋಧಿಸಿ ಶಿಕಾರಿಪುರ ಬಂದ್‌ಗೆ ಕರೆ ನೀಡುತ್ತಿದ್ದಾರೆ. ಆ ಗೊಂದಲಗಳಿಂದ ಹೊರಬರಲಿಆಯನೂರು ಮಂಜುನಾಥ್ ಜಿಲ್ಲಾ ಕಾಂಗ್ರೆಸ್ ವಕ್ತಾರ
‘ಯತ್ನಾಳ ಎತ್ತಿರುವ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸಿ’
‘ಬಿ.ಎಸ್.ಯಡಿಯೂರಪ್ಪ ಲಿಂಗಾಯತ ಸಮುದಾಯದವರೇ ಅಲ್ಲ ಎಂದು ಹೇಳಿಕೆ ನೀಡಿರುವ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಬಿಲಿಯನ್ ಡಾಲರ್ ಪ್ರಶ್ನೆ ಹುಟ್ಟುಹಾಕಿದ್ದಾರೆ. ಸರ್ಕಾರದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಈ ಹೊತ್ತಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅದಕ್ಕೆ ದಾಖಲೆ ಸಮೇತ ಸ್ಪಷ್ಟನೆ ನೀಡಬೇಕು’ ಎಂದು ಆಯನೂರು ಮಂಜುನಾಥ್ ಒತ್ತಾಯಿಸಿದರು. ‘ನಾನು ಯಡಿಯೂರಪ್ಪ ಅವರೊಂದಿಗೆ 30 ವರ್ಷಗಳ ಕಾಲ ಇದ್ದವನು. ಯತ್ನಾಳ ಹೇಳಿಕೆಯಿಂದ ಈಗ ನನ್ನನ್ನೂ ಸೇರಿದಂತೆ ವೀರಶೈವ–ಲಿಂಗಾಯತ ಮಠಾಧೀಶರಲ್ಲಿ ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ಸಮಾಜದಲ್ಲೂ ಗೊಂದಲ ಸೃಷ್ಟಿಯಾಗಿದೆ. ಸಂಸದ ಬಿ.ವೈ. ರಾಘವೇಂದ್ರ ತಮ್ಮ ಮೂಲ ದಾಖಲೆ ವಂಶವೃಕ್ಷ ತಂದೆ ಅಜ್ಜ ಮುತ್ತಜ್ಜನ ಶಾಲಾ ದಾಖಲಾತಿ ಇದ್ದರೆ ನಾಳೆಯೇ ಪತ್ರಿಕಾಗೊಷ್ಠಿ ನಡೆಸಿ ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ಬಸನಗೌಡ ಪಾಟೀಲ ಯತ್ನಾಳ ಅವರಿಗೆ ತಿರುಗೇಟು ನೀಡಲಿ’ ಎಂದು ಆಗ್ರಹಿಸಿದರು. ದಾವಣಗೆರೆಯಲ್ಲಿ ನಡೆದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಮಾವೇಶದಲ್ಲಿ ಧರ್ಮದ ಕಾಲಂನಲ್ಲಿ ‘ವೀರಶೈವ–ಲಿಂಗಾಯತ’ ಎಂದು ಬರೆಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲಿ ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಹಾಜರಿದ್ದರು. ಈಗ ಬಿಜೆಪಿಯನ್ನು ಓಲೈಸಲು ವಿಜಯೇಂದ್ರ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಲು ಹೇಳುತ್ತಿದ್ದಾರೆ. ಇದು ಸಮಾಜವನ್ನು ಗೊಂದಲಕ್ಕೀಡು ಮಾಡಿದೆ. ಸಮೀಕ್ಷೆಯ ವೇಳೆ ಸಂಸದ ಬಿ.ವೈ.ರಾಘವೇಂದ್ರ ಧರ್ಮದ ಕಾಲಂನಲ್ಲಿ ‘ವೀರಶೈವ–ಲಿಂಗಾಯತ’ ಎಂದು ಬರೆಸುತ್ತಾರೋ ಬಿಜೆಪಿಯ ಸೈದ್ಧಾಂತಿಕ ನೆಲೆಗೆ ಬದ್ಧವಾಗಿ ‘ಹಿಂದೂ’ ಎಂದು ಬರೆಸುತ್ತಾರೋ ಎಂಬುದನ್ನು ಬಹಿರಂಗಪಡಿಸಿ ಗೊಂದಲ ನಿವಾರಿಸಲಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.