ಶಿವಮೊಗ್ಗ: ಜಿಲ್ಲಾ ಹಜ್ ಸಮಿತಿಯಿಂದ ಏಪ್ರಿಲ್ 15ರಂದು ಇಲ್ಲಿನ ಮದಾರಿ ಪಾಳ್ಯದ ಹೆವೆನ್ ಪ್ಯಾಲೆಸ್‌ನಲ್ಲಿ ಶಿವಮೊಗ್ಗ, ಹಾಸನ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಜ್ ಯಾತ್ರಿಗಳಿಗೆ ಒಂದು ದಿನದ ತರಬೇತಿ ಆಯೋಜಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ಬಲ್ಕೀಷ್ ಬಾನು ತಿಳಿಸಿದರು.
‘ಶಿವಮೊಗ್ಗ ಜಿಲ್ಲೆಯಿಂದ 188, ಹಾಸನದಿಂದ 125, ಚಿಕ್ಕಮಗಳೂರಿನಿಂದ 117 ಹಾಗೂ ದಾವಣಗೆರೆಯಿಂದ 153 ಯಾತ್ರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ನೀಡಲು ಬೆಂಗಳೂರಿನಿಂದ ಸಂಪನ್ಮೂಲ ವ್ಯಕ್ತಿಗಳು ಬರುತ್ತಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹಜ್ ಯಾತ್ರಿಗಳ ತರಬೇತಿ ಶಿಬಿರದ ಯಶಸ್ವಿಯಾಗಿ 7 ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಒಂದೊಂದು ಸಮಿತಿಯಲ್ಲಿ ವಿವಿಧ ಇಲಾಖೆಗಳ ಅಲ್ಪಸಂಖ್ಯಾತ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ವರ್ಷ ರಾಜ್ಯದಿಂದ 8 ಸಾವಿರಕ್ಕೂ ಹೆಚ್ಚು ಹಜ್ ಯಾತ್ರಿಗಳು ಯಾತ್ರೆ ಕೈಗೊಂಡಿದ್ದು, ಏ. 29ರಿಂದ ಮೇ 15ರವರೆಗೆ ಪ್ರತಿದಿನ ಬೆಂಗಳೂರಿನಿಂದ ವಿಮಾನ ಹೊರಡಲಿದೆ’ ಎಂದರು.
‘ಏ.15ರಂದು ಬೆಳಿಗ್ಗೆ 9ಕ್ಕೆ ನೋಂದಣಿ ಕಾರ್ಯ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ತರಬೇತಿಯ ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾಡಲಿದ್ದಾರೆ. ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್, ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಯಾತ್ರಿಗಳಿಗೆ ಹೆಲ್ತ್ ಕಾರ್ಡ್ ನೀಡಲಾಗುವುದು’ ಎಂದು ತಿಳಿಸಿದರು.
ಅಲ್ತಾಫ್ ಪರ್ವೀಜ್, ನಿಹಾಲ್, ನೂರುಲ್ಲಾ, ಆಸೀಫ್ ಮಸೂದ್, ಅಬ್ದುಲ್ ಮೋಹಿದ್, ಎಂ.ಡಿ. ಷರೀಫ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.