
ಶಿವಮೊಗ್ಗ: ಬಳ್ಳಾರಿಯಲ್ಲಿನ ಗಲಭೆ ಘಟನೆಯನ್ನು ಸಿಐಡಿ ತನಿಖೆಗೆ ವಹಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ತನಿಖಾ ಸಂಸ್ಥೆಯ ವರದಿ ಬಂದ ಬಳಿಕ ಆ ಬಗ್ಗೆ ಚರ್ಚೆ ಮಾಡಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಜ್ಯಮಟ್ಟದ ವಾಲ್ಮೀಕಿ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಗೆ ಭಾನುವಾರ ಶಿವಮೊಗ್ಗಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಳ್ಳಾರಿ ಘಟನೆ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ವಿಚಾರ. ಅದು ಬಹಳ ಸಣ್ಣ ಘಟನೆ. ಆದರೆ ಅಷ್ಟು ದೊಡ್ಡದು ಅಗಬಾರದಿತ್ತು. ಪೊಲೀಸರ ತನಿಖೆ ಬಳಿಕ ತಪ್ಪಿತಸ್ಥರು ಯಾರೆಂದು ತಿಳಿಯಲಿದೆ ಎಂದು ಹೇಳಿದ ಜಾರಕಿಹೊಳಿ, ಅಲ್ಲಿನ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡಲು ಆಗದೇ ಇರುವುದೇ ಎಸ್ಪಿ ಅವರನ್ನು ಸಸ್ಪೆಂಡ್ ಮಾಡಲು ಕಾರಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ಬಜೆಟ್ ನಂತರ ಅಧಿಕಾರದ ಹಸ್ತಾಂತರದ ಬಗ್ಗೆ ದೆಹಲಿಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ನೀವು (ಮಾಧ್ಯಮದವರು) ಯಾರನ್ನ ತೆಗಿಬೇಕು ಅಂತಿರಾ, ಇಡಬೇಕು ಅಂತಿರಾ ಎಲ್ಲವೂ ನಿರ್ಧಾರ ಹೈಕಮಾಂಡ್ ಅವರದ್ದು. ಅಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಗಲಿದೆ. ಹಾಗೆಂದು ಸದ್ಯ ಸಿಎಂ ಸ್ಥಾನದ ರೇಸ್‌ನಲ್ಲಿ ನಾನು ಇಲ್ಲ. ಅವಕಾಶ ಬಂದಾಗ ನೋಡೋಣ. ಕ್ರಿಕೆಟ್‌ನಲ್ಲಿ ನಾನು ಬ್ಯಾಟಿಂಗ್ ಚೆನ್ನಾಗಿ ಆಡುತ್ತೇನೆ. ಅದೇ ರೀತಿ ರಾಜಕೀಯದಲ್ಲೂ ಗೂಗ್ಲಿ ಬಾಲ್ ಹಾಕಲೇಬೇಕು. ಇಲ್ಲವಾದರೆ ಯಶಸ್ಸು ಸಿಗುವುದಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಸತೀಶ್ ಮಾರ್ಮಿಕವಾಗಿ ಉತ್ತರಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಈಗ ಮಾತಾಡುವುದಿಲ್ಲ. ನೋಡೋಣ ಅದು ಇನ್ನೂ ದೊಡ್ಡ ಮ್ಯಾಚ್ ಇದೆ ಎಂದರು.
‘ನರೇಗಾ ಸ್ವರೂಪವನ್ನು ಬದಲಾಯಿಸಿ ಜಿ–ರಾಮ್ ಜಿ ಎಂದು ನಾಮಕರಣ ಮಾಡಿರುವುದು ಬಡವರ ವಿರೋಧಿ ಕ್ರಮ. ಮೊದಲು ಪಂಚಾಯ್ತಿ ಮಟ್ಟದಲ್ಲಿ ಅಧಿಕಾರ ಇತ್ತು. ಈಗ ದೆಹಲಿಯಲ್ಲಿ ಅಧಿಕಾರ ಕೇಂದ್ರೀಕೃತವಾಗಿದೆ. ಯೋಜನೆಗೆ ಕೇಂದ್ರದ ಪಾಲೇ ಹೆಚ್ಚಿದೆ. ಯಾವ ಪಂಚಾಯ್ತಿಗೆ ಹಣ ಬಿಡುಗಡೆ ಮಾಡಬೇಕು ಎಂಬ ತೀರ್ಮಾನ ಅವರದ್ದು. ನಮ್ಮ(ರಾಜ್ಯ ಸರ್ಕಾರ) ಬಲ ಹೆಚ್ಚಿಲ್ಲ. ಹೇಗೆ ವಿರೋಧ ಮಾಡೋದು? ಆದರೂ ವಿರೋಧ ಮಾಡಲೇಬೇಕು ಹೀಗಾಗಿ ಮಾಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.