ADVERTISEMENT

ಬಡವರ ಪರ ಕಾಳಜಿ ಹೊಂದಿದ್ದ ಬಂಗಾರಪ್ಪ

ಆನಂದಪುರ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:59 IST
Last Updated 9 ಆಗಸ್ಟ್ 2025, 4:59 IST
ಸೊರಬ ಪಟ್ಟಣದಲ್ಲಿರುವ ಬಂಗಾರಧಾಮಕ್ಕೆ ವಿವಿಧ ಮಠಾದೀಶರು ಶುಕ್ರವಾರ ಭೇಟಿ ನೀಡಿದ್ದರು 
ಸೊರಬ ಪಟ್ಟಣದಲ್ಲಿರುವ ಬಂಗಾರಧಾಮಕ್ಕೆ ವಿವಿಧ ಮಠಾದೀಶರು ಶುಕ್ರವಾರ ಭೇಟಿ ನೀಡಿದ್ದರು    

ಸೊರಬ: ‘ಬಡವರ ಪರ ಅಪಾರ ಕಾಳಜಿ ಮತ್ತು ಜನ ಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನು ಮೊದಲು ಉನ್ನತೀಕರಣ ಮಾಡಬೇಕು ಎನ್ನುವ ಅಭಿಲಾಷೆ ಹೊಂದಿದ್ದವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ’ ಎಂದು ಆನಂದಪುರ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮತ್ತು ಶಕುಂತಲಮ್ಮ ಬಂಗಾರಪ್ಪ ಅವರ ಸಮಾಧಿ ಸ್ಥಳವಾದ ಬಂಗಾರಧಾಮಕ್ಕೆ ಶುಕ್ರವಾರ ಭೇಟಿ ನೀಡಿ, ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನು ಉನ್ನತೀಕರಣ ಮಾಡಬೇಕು ಎಂದು ಘೋಷಣೆಯಾದಾಗ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಆದರೆ, ಬಡವರ ಆರೋಗ್ಯಕ್ಕೆ ಆಸ್ಪತ್ರೆ ಮೊದಲು ಉನ್ನತೀಕರಣವಾಗಲಿ, ನಂತರ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎನ್ನುವ ಅಭಿಪ್ರಾಯವನ್ನು ಬಂಗಾರಪ್ಪ ಮಂಡಿಸಿದ್ದರು. ಇದು ಜನರ ಬಗ್ಗೆ ಅವರಿಗಿದ್ದ ಕಾಳಜಿಯನ್ನು ತಿಳಿಸುತ್ತದೆ’ ಎಂದು ಹೇಳಿದರು.

ADVERTISEMENT

‘ವಿವಿಧ ಹಂತದ ರಾಜಕೀಯ ಸ್ಥಾನಮಾನ ಪಡೆದಾಗಲೂ ಅವರು ಶ್ರೀ ಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆಕರ್ಷಣೀಯ ವ್ಯಕ್ತಿತ್ವ, ಉತ್ತಮ ವಿಚಾರವಂತ, ತಜ್ಞ, ರಾಜಕೀಯ ಪ್ರಬುದ್ಧತೆ ಹೊಂದಿದ ರಾಜ್ಯದ ಅಪರೂಪದ ರಾಜಕಾರಣಿ ಎಸ್. ಬಂಗಾರಪ್ಪ ಅವರಾಗಿದ್ದರು’ ಎಂದು ಹೇಳಿದರು.

‘ರಾಜಕೀಯ ಒತ್ತಡಗಳ ನಡುವೆಯೂ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಶಿವಮೊಗ್ಗದ ಪಂಡಿತ ಪುಟ್ಟರಾಜ ಗವಾಯಿಗಳವರ ಅಂಧ ಮಕ್ಕಳ ಸಂಗೀತ ವಿದ್ಯಾಲಯಕ್ಕೆ ನಿವೇಶನ ದೊರಕಿಸಿಕೊಡಲು ಮತ್ತು ಪಾಠ ಶಾಲೆ ನಿರ್ಮಾಣವಾಗಲು ಬಂಗಾರಪ್ಪ ಅವರ ಕೊಡುಗೆ ಸಾಕಷ್ಟಿದೆ. ಈ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಗುಣ ಅವರಲ್ಲಿತ್ತು’ ಎಂದು ಹೇಳಿದರು.

ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಪ್ರಭು ಸ್ವಾಮೀಜಿ, ನಂದಿ ಸ್ವಾಮೀಜಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ, ದಂತ ವೈದ್ಯ ಡಾ.ಎಚ್.ಇ. ಜ್ಞಾನೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುನೀಲ್ ಗೌಡ, ಎಪಿಎಂಸಿ ಮಾಜಿ ಸದಸ್ಯ ಪ್ರಕಾಶ್ ಹಳೇಸೊರಬ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಪುರಸಭೆ ನಾಮನಿರ್ದೇಶನ ಸದಸ್ಯ ಪರಶುರಾಮ ಸಣ್ಣಬೈಲು, ಕೊಡಕಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನೆಹರೂ, ಪ್ರಮುಖರಾದ ಕುಮಾರಸ್ವಾಮಿ, ಯು.ಫಯಾಜ್ ಅಹ್ಮದ್, ಪ್ರದೀಪ ಅಂದವಳ್ಳಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.