
ಶಿವಮೊಗ್ಗ: ಸೊರಬದ ಬಂಗಾರಧಾಮದಲ್ಲಿ ಅಕ್ಟೋಬರ್ 26ರಂದು ‘ನಮನ–ಚಿಂತನ–ಸನ್ಮಾನ’ ಉದ್ದೇಶದೊಂದಿಗೆ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ಬಂಗಾರಪ್ಪ ಅವರ 93ನೇ ಹುಟ್ಟುಹಬ್ಬದ ಸಂಭ್ರಮ ಇಡೀ ದಿನ ಮನೆಮಾಡಲಿದೆ.
ಈ ಸ್ಮರಣೀಯ ಕಾರ್ಯಕ್ರಮವನ್ನು ಎಸ್.ಬಂಗಾರಪ್ಪ ಫೌಂಡೇಷನ್ ಹಾಗೂ ಎಸ್.ಬಂಗಾರಪ್ಪ ವಿಚಾರ ವೇದಿಕೆಯಿಂದ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ವೇಣುಗೋಪಾಲ ನಾಯಕ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಮಾರಂಭದ ಭಾಗವಾಗಿ ಎಸ್.ಬಂಗಾರಪ್ಪ ಅವರ ಗೌರವಾರ್ಥ ‘ಬಂಗಾರ’ ಹೆಸರಿನ ವಿವಿಧ ಪ್ರಶಸ್ತಿಗಳ ಪ್ರದಾನ, ವಿಚಾರ ಸಂಕಿರಣ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವವನ್ನೂ ಇದೇ ವೇಳೆ ಆಯೋಜಿಸಲಾಗಿದೆ ಎಂದರು.
ಅಂದು ಬೆಳಿಗ್ಗೆ 10.30ಕ್ಕೆ ಸೊರಬದ ಡಾ.ರಾಜಕುಮಾರ್ ರಂಗಮಂದಿರದಲ್ಲಿ ಬಂಗಾರಪ್ಪನವರ ಚಿಂತನೆಗಳು ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ. ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ‘ಸುಸ್ಥಿರ ಬದುಕು’ ವಿಷಯದ ಕುರಿತು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ವಿಚಾರ ಮಂಡನೆ ಮಾಡಲಿದ್ದಾರೆ. ಸಾಹಿತಿ ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಳೆಗಟ್ಟಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಂಗಾರಪ್ಪ ಫೌಂಡೇಷನ್ ಪ್ರಮುಖರಾದ ಶಮಂತ್, ಆದರ್ಶ ಹುಂಚದಕಟ್ಟೆ ಇದ್ದರು.
‘ಬಂಗಾರಧಾಮ’ ಈಗ ಶೋಷಿತರ ಚೈತ್ರಭೂಮಿ..
ಎಸ್.ಬಂಗಾರಪ್ಪ ಹಾಗೂ ಶಕುಂತಲಾ ದಂಪತಿಯ ಸಮಾಧಿ ಸ್ಥಳ ಬಂಗಾರಧಾಮಕ್ಕೆ ರಾಜ್ಯ ಸರ್ಕಾರ ಈಗ ರಾಜ್ಯದ ಪ್ರವಾಸಿ ಸ್ಥಳಗಳ ನಕ್ಷೆಯಲ್ಲಿ ಸ್ಥಾನ ನೀಡಿದೆ. ಪುತ್ರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕನಸಿನಂತೆ ವಿಭಿನ್ನ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ರೂಪುಗೊಂಡಿರುವ ಬಂಗಾರಧಾಮ ಈಗ ರಾಜ್ಯದ ಹಿಂದುಳಿದ ವರ್ಗದವರು ಶೋಷಿತರು ಎಲ್ಲ ಸಮುದಾಯಗಳ ಬಡವರು ಹಾಗೂ ಬಂಗಾರಪ್ಪ ಅವರ ಅಭಿಮಾನಿಗಳ ಚೈತ್ರಭೂಮಿಯಾಗಿ ಮಾರ್ಪಟ್ಟಿದೆ ಎಂದು ವಿಚಾರ ವೇದಿಕೆ ಮುಖಂಡ ಜಿ.ಡಿ.ಮಂಜುನಾಥ್ ಹೇಳಿದರು.
ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಎಲ್ಲ ಭಾಗಗಳಿಂದಲೂ ಬಂಗಾರಪ್ಪ ಅವರ ಒಡನಾಡಿಗಳು ಅಭಿಮಾನಿಗಳು ಬಂಗಾರಧಾಮಕ್ಕೆ ಬರಲಿದ್ದು ಇಡೀ ದಿನ ಬಂಗಾರಪ್ಪ ಅವರ ಚಿಂತನೆಗಳಿಗೆ ದನಿಯಾಗಲಿದ್ದಾರೆ. ಮಹಾನ್ ಚೇತನಕ್ಕೆ ವಂದಿಸಿ ಗೌರವ ಸಮರ್ಪಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಂಗಾರಪ್ಪನವರ ಹುಟ್ಟುಹಬ್ಬ: ರಕ್ತದಾನ ಶಿಬಿರ ನಾಳೆ ಶಿ
ವಮೊಗ್ಗ: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಅಕ್ಟೋಬರ್ 26ರಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಶಿವಮೊಗ್ಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ತಿಳಿಸಿದ್ದಾರೆ. ಶಿವಮೊಗ್ಗದ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದ್ದಾರೆ. ದಾನಿಗಳು ಹೆಚ್ಚಿನ ವಿವರಗಳಿಗಾಗಿ ಡಾ.ಶರತ್ ಮರಿಯಪ್ಪ (96111–09995) ವಿನಯ್ ತಾಂಡ್ಲೆ (72045–63074) ಹಾಗೂ ನಾಗರಾಜ್ ಕುರುವಳ್ಳಿ (94817–36222) ಅವರನ್ನು ಸಂಪರ್ಕಿಸಲು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.