ADVERTISEMENT

ಬಾರಂದೂರಿಗೆ ಬಂತು ‘ಗಾಂಧಿ ಗ್ರಾಮ’ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 7:07 IST
Last Updated 11 ಮಾರ್ಚ್ 2025, 7:07 IST
ಭದ್ರಾವತಿ ತಾಲ್ಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ
ಭದ್ರಾವತಿ ತಾಲ್ಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ    

ಭದ್ರಾವತಿ: ‘ಗ್ರಾಮ ಸ್ವರಾಜ್ಯವಾದರೇ ದೇಶ ಉದ್ಧಾರವಾದಂತೆ’ ಎಂಬ ಕನಸನ್ನು ಮಹಾತ್ಮಾ ಗಾಂಧೀಜಿ ಕಂಡಿದ್ದರು. ಅದನ್ನು ತಾಲ್ಲೂಕಿನ ಬಾರಂದೂರು ಗ್ರಾಮ ನನಸು ಮಾಡಿದೆ. ಇದೇ ಕಾರಣಕ್ಕೆ 2023-24ನೇ ಸಾಲಿನ 'ಗಾಂಧಿ ಗ್ರಾಮ' ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ನಗರದಿಂದ 6 ಕಿಲೋಮೀಟರ್ ದೂರವಿರುವ ಈ ಗ್ರಾಮದಲ್ಲಿ 1,922 ಮನೆಗಳಿದ್ದು, 6,000ಕ್ಕೂ ಅಧಿಕ ಜನಸಂಖ್ಯೆ ಇದೆ. ಸರ್ಕಾರದ ಅನುದಾನ ಬಳಸಿ ಗ್ರಾಮಗಳಿಗೆ ಅಗತ್ಯ ಸೌಕರ್ಯಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ಉದ್ಯಾನ, ಕಾಂಪೌಂಡ್, ಶೌಚಾಲಯ, ಸಾಕ್ಷರತಾ ಅನುಪಾತ, ಬಾಲ್ಯ ವಿವಾಹ ತಡೆ, ಶಾಲಾ ಕಟ್ಟಡ ನವೀಕರಣ, ಶುದ್ಧ ನೀರಿನ ವ್ಯವಸ್ಥೆ, ಬೀದಿ ದೀಪ, ಸಿಮೆಂಟ್ ರಸ್ತೆ ನಿರ್ಮಾಣ, ಡಿಜಿಟಲ್ ಗ್ರಂಥಾಲಯ ಸೇವೆ, ಶುದ್ಧ ಕುಡಿಯುವ ನೀರಿನ ಘಟಕ, ತ್ಯಾಜ್ಯ ವಿಲೇವಾರಿ, ಬಾಕ್ಸ್ ಚರಂಡಿಗಳ ನಿರ್ಮಾಣ, ಅರ್ಧ ಗಂಟೆಗೊಂದು ಸಾರಿಗೆ ಬಸ್ ವ್ಯವಸ್ಥೆ, ಮನೆಮನೆಗೆ ಗಂಗೆ... ಹೀಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅದನ್ನು ಪರಿಗಣಿಸಿ ಸರ್ಕಾರ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಮನರೇಗಾ ಅಡಿ ಗ್ರಾಮದಲ್ಲಿ 2 ಕೆರೆಗಳ ಅಭಿವೃದ್ಧಿ, 4 ದನದ ಕೊಟ್ಟಿಗೆ, ಮನೆಗಳ ನಿರ್ಮಾಣ, ಮನೆಗೊಂದು ಶೌಚಾಲಯ, ಜಮೀನು ಹೊಂದಿದ ಐವರು ಬಿ.ಪಿ.ಎಲ್. ಕಾರ್ಡ್‌ದಾರರಿಗೆ ಅಡಿಕೆ ತೋಟ ನಿರ್ಮಿಸಲು ಸಹಾಯ ನೀಡಲಾಗಿದೆ.

ADVERTISEMENT

ಶಾಲೆಗಳ ನವೀಕರಣ : ಗ್ರಾಮದಲ್ಲಿ ಒಟ್ಟು ಮೂರು ಸರ್ಕಾರಿ ಶಾಲೆಗಳು, ಎಂಟು ಅಂಗನವಾಡಿ ಕೇಂದ್ರಗಳು ಇವೆ. ಈ ಎಲ್ಲಾ ಕಟ್ಟಡಗಳನ್ನು ನವೀಕರಣಗೊಳಿಸಿ ಸುಣ್ಣ–ಬಣ್ಣ ಬಳಿಯಲಾಗಿದೆ. ಈಚೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿ ಕೆರೆ ಶಾಲೆಗೆ ತಾಲ್ಲೂಕಿನ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿಯೂ ಲಭಿಸಿದೆ. ಶಾಲೆಯಲ್ಲಿ ಉದ್ಯಾನ, ಆಟದ ಮೈದಾನ, ನವೀನ ಮಾದರಿಯ ಶೌಚಾಲಯ ನಿರ್ಮಾಣದೊಂದಿಗೆ ಮೂಲ ಸೌಲಭ್ಯ ಕಲ್ಪಿಸಿ, ಆಂಗ್ಲ ಮಾಧ್ಯಮದಲ್ಲೂ ಶಾಲೆ ನಡೆಯುತ್ತಿದೆ.

ಮಾಸಿಕ ಸಭೆ :

ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿ ಸದಸ್ಯರ ವಾರ್ಡ್ ಸಭೆ ನಡೆಸಿ, ಗ್ರಾಮದ ಅಭಿವೃದ್ಧಿಯ ವಿಚಾರವಾಗಿ ಚರ್ಚಿಸಲಾಗುತ್ತಿದೆ. ಗ್ರಾಮದ ಅಧಿಕಾರಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರಿಂದ ಮತ್ತು ಗ್ರಾಮದ ಮುಖಂಡರಿಂದ ಸಲಹೆ– ಸೂಚನೆ, ಸಹಾಯ ಪಡೆಯಲಾಗುತ್ತಿದೆ  ಎಂದು ಗ್ರಾಮದ ಹಿರಿಯರಾದ ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾರಂದೂರು, ಮಾವಿನಕೆರೆ ಮತ್ತು ಕಾರೆಹಳ್ಳಿ ಗ್ರಾಮಗಳಿಗೂ ಸೇರಿ ಒಂದು ಫಿಲ್ಟರ್, ಐದು ನೀರಿನ ಟ್ಯಾಂಕ್‌ಗಳನ್ನು ಮಲ್ಟಿ ವಿಲೇಜ್ ಸ್ಕೀಮ್ ಅಡಿ ನಿರ್ಮಿಸಿ 10 ವರ್ಷ ಕಳೆದಿವೆ. ಈಗಿನ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಎರಡು ಫಿಲ್ಟರ್ ಅವಶ್ಯಕತೆ ಇದೆ ಎಂದು ಗ್ರಾಮದ ನಿವಾಸಿ ಬಾಬು ಹೇಳಿದರು.

ಪ್ರಶಸ್ತಿಯು ₹ 5 ಲಕ್ಷ ನಗದು, ಫಲಕ ಮತ್ತು ಪ್ರಮಾಣಪತ್ರ ಒಳಗೊಂಡಿದೆ. ನಗದು ಬಹುಮಾನವನ್ನು ಘನ ತ್ಯಾಜ್ಯ ವಿಲೇವಾರಿ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನ್ ವಿವರಿಸಿದರು.

ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಿರುವುದು.
ಉದ್ಯಾನವನ ಆಟದ ಮೈದಾನದೊಂದಿಗೆ ಹಳ್ಳಿಕೆರೆ ಶಾಲೆ
ನೀರಿನ ಟ್ಯಾಂಕ್ ಗಳು
ದನದ ಕೊಟ್ಟಿಗೆ ನಿರ್ಮಾಣ ಮಾಡಿರುವುದು.
ಆಟದ ಮೈದಾನದೊಂದಿಗೆ ಅಂಗನವಾಡಿ ಕೇಂದ್ರ
ಬಾಕ್ಸ್ ಸಿಮೆಂಟ್ ಚರಂಡಿ ವ್ಯವಸ್ಥೆ
ಸರ್ಕಾರಿ ಶಾಲೆಯ ಕಾರ್ಯಕ್ರಮ ಒಂದರಲ್ಲಿ ತುಂಬಿರುವ ಮಕ್ಕಳು.
ದಿನ ನಿತ್ಯ ಬಳಸುವ ಕಸದ ಗಾಡಿ
ಕೆರೆಗಳ ಕಾಮಗಾರಿ ಪರಿಶೀಲಿಸುತ್ತಿರುವ ಗ್ರಾಮಸ್ಥರು
ಜಿಲ್ಲಾ ಮಟ್ಟದ ಸಮಿತಿ ನೀಡಿದ ಅಂಕಗಳ ಮಾನದಂಡದ ಮೇಲೆ ಬಾರಂದೂರು ಗ್ರಾಮ ಪಂಚಾಯಿತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ಗಂಗಣ್ಣ ಕಾರ್ಯನಿರ್ವಾಹಕ ಅಧಿಕಾರಿ ಭದ್ರಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.