ADVERTISEMENT

ಬೋಟಿಂಗ್‌ನಲ್ಲಿ ಹಾಲಪ್ಪ ಅವ್ಯವಹಾರ: ಬೇಳೂರು ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 10:04 IST
Last Updated 2 ಮಾರ್ಚ್ 2020, 10:04 IST
ಬೇಳೂರು ಗೋಪಾಲಕೃಷ್ಣ
ಬೇಳೂರು ಗೋಪಾಲಕೃಷ್ಣ   

ಸಾಗರ: ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಸರ್ಕಾರಕ್ಕೆ ಸೇರಿದ ಗಣಪತಿ ಕೆರೆಯಲ್ಲಿ ಯಾವುದೇ ಇಲಾಖೆ ಅನುಮತಿ ಪಡೆಯದೆ ತಮ್ಮ ಹಿಂಬಾಲಕರಿಂದ ಬೋಟಿಂಗ್ ನಡೆಸಿ ಲಕ್ಷಾಂತರ ರೂಪಾಯಿ ಸಂಗ್ರಹಿಸುವ ಮೂಲಕ ಶಾಸಕ ಎಚ್.ಹಾಲಪ್ಪ ಹರತಾಳು ಅವ್ಯವಹಾರ ನಡೆಸಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಒಂದು ವೇಳೆ ಗಣಪತಿ ಕೆರೆಯಲ್ಲಿ ಕಾನೂನಿನ ನಿಯಮಗಳಿಗೆ ಅನುಸಾರವಾಗಿ ಬೋಟಿಂಗ್ ನಡೆಸುವುದಾದರೆ ಸಂಬಂಧಪಟ್ಟ ಇಲಾಖೆಯ ಮೂಲಕ ಟೆಂಡರ್ ಕರೆಸಬೇಕಿತ್ತು. ಶಾಸಕ ಹಾಲಪ್ಪ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಸಂಬಂಧಿಕರಿಗೆ ಬೋಟಿಂಗ್ ನಡೆಸುವ ಜವಾಬ್ದಾರಿಯನ್ನು ನೀಡಿದ್ದಾರೆ. ಈ ಸಂಬಂಧ ಮೌನ ವಹಿಸಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡುತ್ತೇನೆ‘ ಎಂದು ಹೇಳಿದರು.

ಬೋಟಿಂಗ್‌ನಿಂದ ಸಂಗ್ರಹವಾಗಿರುವ ಹಣವನ್ನು ಶಾಸಕ ಹಾಲಪ್ಪ ಅವರು ಮಾರಿಕಾಂಬಾ ದೇವಸ್ಥಾನಕ್ಕೆ ನೀಡಬೇಕು. ಆದರೆ ಅದರ ಬದಲು ಬೋಟಿಂಗ್ ವ್ಯವಸ್ಥೆ ಮಾಡಿದ್ದಕ್ಕಾಗಿ ಅವರು ಸಮಿತಿ ವತಿಯಿಂದಲೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪಕ್ಕದಲ್ಲಿ ಸಂತೆ ಮೈದಾನ ನಿರ್ಮಿಸಿದ್ದು, ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತದೆ ಎಂದು ಹಾಲಪ್ಪ ವಿರೋಧಿಸಿದ್ದರು. ಆದರೆ ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿರುವ ಶಾಹಿ ಗಾರ್ಮೆಂಟ್ ಸಮೀಪ ಬಾರ್ ಎಂಡ್ ರೆಸ್ಟೋರೆಂಟ್ ಆರಂಭಕ್ಕೆ ಅನುಮತಿ ನೀಡಿದ್ದಾರೆ. ಇದಕ್ಕಾಗಿ ₹ 25 ಲಕ್ಷ ಪಡೆದಿರುವ ಮಾಹಿತಿ ಇದೆ ಎಂದು ದೂರಿದರು.

ತಾಲ್ಲೂಕಿನ ಬರೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಕಾರಿಪುರ ತಾಲ್ಲೂಕಿನ ಕೃಷಿಭೂಮಿಗೆ ನೀರುಣಿಸಲು ಕಲ್ಲೊಡ್ಡು ಹೊಸಕರೆ ಯೋಜನೆ ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಮುಂದಾಗಿದ್ದರು. ಜನರ ಪ್ರತಿಭಟನೆ ನಂತರ ಈ ಯೋಜನೆಯನ್ನು ತಾಲ್ಲೂಕಿನಿಂದ ಸ್ಥಳಾಂತರಗೊಳಿಸಲಾಗಿದೆ ಎಂದು ಶಾಸಕ ಹಾಲಪ್ಪ ಹೇಳಿದ್ದರು. ಆದರೆ ಈಚೆಗೆ ಶಿಕಾರಿಪುರದಲ್ಲಿ ಸಂಸದರು ಮತ್ತೊಮ್ಮೆ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದು ಜನರ ಆತಂಕಕ್ಕೆ ಕಾರಣವಾಗಿದೆ ಎಂದರು.

ಪ್ರತಿಯೊಂದು ಗುತ್ತಿಗೆಗೆ ಇಂತಿಷ್ಟು ಪ್ರಮಾಣದ ಕಮಿಷನ್ ನೀಡಬೇಕು ಎಂದು ನಿಗದಿಪಡಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ, ಉದ್ಯೋಗ ಖಾತ್ರಿ ಕೂಲಿ, ಆಶ್ರಯ ಮನೆಗಳಿಗೆ ಹಣ ಬಿಡುಗಡೆ ಸೇರಿ ಎಲ್ಲ ಅಭಿವೃದ್ಧಿಯಲ್ಲಿ ವಿಫಲರಾಗಿದ್ದಾರೆ. ಇದನ್ನು ಜನರಿಗೆ ತಿಳಿಸಲು ಶೀಘ್ರ ಬಹಿರಂಗ ಸಮಾವೇಶ ಆಯೋಜಿಸುವುದಾಗಿ ತಿಳಿಸಿದರು.

’ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿರುದ್ಧ ಕಾಂಗ್ರೆಸ್ ಪಕ್ಷದ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿರುವಲ್ಲಿ ನನ್ನ ಪಾತ್ರವಿಲ್ಲ‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಕಾಂಗ್ರೆಸ್‌ನ ತಾರಾಮೂರ್ತಿ, ಕನ್ನಪ್ಪ ಮುಳಕೇರಿ, ತನ್ವೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.