
ಶಿವಮೊಗ್ಗ: ‘ಕಾಂಗ್ರೆಸ್‌ನವರು ಕಮಿಷನ್ ಆಸೆಗೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ. ಹಾಗಿದ್ದರೆ ಬಿಜೆಪಿಯವರು ಸಿಗಂದೂರು ಸೇತುವೆ ನಿರ್ಮಾಣದ ವೇಳೆ ಕಮಿಷನ್ ರೂಪದಲ್ಲಿ ಸಿಕ್ಕಾಪಟ್ಟೆ ದುಡ್ಡು ಹೊಡೆದಿರಬೇಕಲ್ಲವೇ’ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಶಿಕಾರಿಪುರಕ್ಕೆ ತಂದು ಹಾಕಿರುವುದು ದುಡ್ಡು ಹೊಡೆಯುವ ಕೆಲಸವೇ?’ ಎಂದು ತಿರುಗೇಟು ನೀಡಿದರು.
‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಭಾರೀ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತದೆ ಎಂದು ಬಿಜೆಪಿಯವರು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಶಿವಮೊಗ್ಗ-ಸಾಗರ ನಡುವೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಎಷ್ಟು ಅರಣ್ಯ ನಾಶವಾಗುತ್ತಿದೆ. ಹಾಗೆಂದು ಅವರು (ಬಿಜೆಪಿ) ಯೋಜನೆ ನಿಲ್ಲಿಸುತ್ತಾರೆಯೇ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ’ ಎಂದು ಬೇಳೂರು ಒತ್ತಾಯಿಸಿದರು.
‘ಪಂಪ್ಡ್ ಸ್ಟೋರೇಜ್ ಯೋಜನೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮುನ್ನೆಲೆಗೆ ಬಂದದ್ದು. ಅದಕ್ಕೆ ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ. ಯೋಜನೆ ವಿರೋಧಿಸಿ ಹೋರಾಟ ಮಾಡುತ್ತಿರುವವರ ಬಗ್ಗೆ ತಕರಾರು ಇಲ್ಲ. ಹೋರಾಟ ಎಲ್ಲರ ಹಕ್ಕು. ರೈತ ಸಂಘದ ಕೆಲವರು ಹಾಗೂ ಇನ್ನೂ ಕೆಲವು ಪರಿಸರ ಹೋರಾಟಗಾರರು ತಾವೇ ಎಂಜಿನಿಯರ್‌ಗಳ ರೀತಿ ಜನರಿಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಆರೋಪ ಮಾಡಿ ಯೋಜನೆಗೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ. ಅವರೊಂದಿಗೆ ಬಿಜೆಪಿಯವರು ಸೇರಿಕೊಂಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು’ ಎಂದು ಹರಿಹಾಯ್ದರು.
‘ಶರಾವತಿ ಪಂಪ್ಡ್‌ಸ್ಟೋರೇಜ್ ದೇಶದ ಎರಡನೇ ಅತಿದೊಡ್ಡ ಯೋಜನೆ. ಮುಂದಿನ ಪೀಳಿಗೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಯಾವುದೇ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡರೂ ಸ್ವಲ್ಪಮಟ್ಟಿನ ಅರಣ್ಯ ನಾಶ ಆಗುವುದು ನಿಶ್ಚಿತ. ಅದಕ್ಕೆ ಪರ್ಯಾಯವಾಗಿ ಅರಣ್ಯ ಬೆಳೆಸಲು ಕೆಪಿಸಿಎಲ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಮಿ ಗುರುತಿಸಿದೆ. ಹಾಗಿದ್ದರೂ ಸುಮ್ಮನೆ ಅಪಾದನೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. ಸಂಸದರೂ ಆ ಪಕ್ಷದವರೇ ಇದ್ದಾರೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ನಿಲ್ಲಿಸಿದರೆ ನಮ್ಮದೇನೂ (ಕಾಂಗ್ರೆಸ್) ಅಭ್ಯಂತರವಿಲ್ಲ’ ಎಂದು ಬೇಳೂರು ಸ್ಪಷ್ಟಪಡಿಸಿದರು.
‘ಯೋಜನೆಯ ಅನುಷ್ಠಾನಕ್ಕೆ ಅವಕಾಶ ಕೊಡಿ. ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಬೇಡ ಎಂದು ಪ್ರತಿಭಟನೆ ನಡೆಸುತ್ತಿರುವ ಮಠಾಧೀಶರಿಗೆ ಕೈಮುಗಿದು ಕೇಳುವೆ. ಬಿಜೆಪಿಯವರಿಗೂ, ಬೇರೆ ಹೋರಾಟಗಾರರಿಗೂ ಇದೇ ಸಂದೇಶ ಕೊಡುವೆ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ವೈ.ಎಚ್.ನಾಗರಾಜ್ ಹಾಜರಿದ್ದರು.
ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಅವರನ್ನೇ ನಾವು ಶಾಸಕರು ಬೆಂಬಲಿಸುತ್ತೇವೆ. ಯತೀಂದ್ರ ಅವರೋ ಮತ್ತ್ಯಾರೋ ಹೇಳಿದರೆ ಆಗುವುದಿಲ್ಲಬೇಳೂರು ಗೋಪಾಲಕೃಷ್ಣ ಸಾಗರ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.