ADVERTISEMENT

ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ. 26ರಂದು ಬೆಂಗಳೂರು ಚಲೋ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:36 IST
Last Updated 15 ನವೆಂಬರ್ 2025, 6:36 IST

ಶಿವಮೊಗ್ಗ: ‘ರಾಜ್ಯದಲ್ಲಿ ಕಬ್ಬಿನ ಬೆಲೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಯಲು ರಾಜ್ಯ ಬೆಲೆ ನಿಗದಿ ನೀತಿಯನ್ನು ರೂಪಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

‘ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಬೇಕು, ಸರ್ಕಾರ ಬಲವಂತದ ಭೂಸ್ವಾಧೀನಗಳನ್ನು ಕೈಬಿಡಬೇಕು. ಬಗರ್‌ಹುಕುಂ ಭೂಮಿಗಳನ್ನು ಒನ್‌ಟೈಮ್ ಸೆಟಲ್‌ಮೆಂಟ್‌ ಆಧಾರದಲ್ಲಿ ಹಂಚುವ ಗಟ್ಟಿ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕು. ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಾಮಾಜಿಕ ಅವಮಾನ ಕ್ರಿಯೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲ ಕಿರು ಹಣಕಾಸು ಸಂಸ್ಥೆಗಳನ್ನು ಆರ್‌ಬಿಐ ನಿಯಂತ್ರಣದಡಿ ತರಬೇಕು. ಸಣ್ಣ ರೈತರು ಮಾಡಿರುವ ಸಾಲ ಮನ್ನಾಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ವಿದ್ಯುತ್ ಸಂಪರ್ಕ ವೆಚ್ಚವನ್ನು ರೈತರ ಮೇಲೆಯೇ ಹೇರುವ ರೀತಿ ರದ್ದಾಗಬೇಕು. ತುಂಗಭದ್ರಾ ಅಣೆಕಟ್ಟಿನ ಕ್ರಸ್ಟ್‌ ಗೇಟ್‌ಗಳನ್ನು ಬದಲಾಯಿಸಲು ಒಂದು ಬೆಳೆಗೆ ನೀರು ಕೊಡುವುದಿಲ್ಲವೆಂಬ ತೀರ್ಮಾನವನ್ನು ಬದಲಾಯಿಸಬೇಕು. ಮೆಕ್ಕೆಜೋಳ ಸೇರಿ ಎಲ್ಲ ಬೆಳೆಗಳ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು. ಶ್ರಮಜೀವಿಗಳನ್ನು ಗುಲಾಮರಂತೆ ನಡೆಸಿಕೊಳ್ಳುವ ಅಮಾನವೀಯ ಪದ್ಧತಿಗಳು ಕೂಡಲೇ ಕೊನೆಗೊಳ್ಳಬೇಕು. ರಾಜ್ಯ ಸರ್ಕಾರವು ಹೊಸ ಕನಿಷ್ಠ ವೇತನ ಸಮಿತಿಯನ್ನು ರಚಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಭೂ ತಿದ್ದುಪಡಿ ನೀತಿ, ಎಪಿಎಂಸಿ ತಿದ್ದುಪಡಿ ನೀತಿ ರದ್ದುಗೊಳಿಸಬೇಕು. ರಾಷ್ಟ್ರೀಯ ಕೃಷಿ ನೀತಿಯನ್ನು ತಿರಸ್ಕರಿಸಬೇಕು. ಪ್ರಜಾತಂತ್ರವನ್ನು ಮುಗಿಸಲು ಹೊರಟಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಬಲವಾಗಿ ಪ್ರತಿರೋಧಿಸಲು ಕ್ರಮವಹಿಸಬೇಕು. ಅವೈಜ್ಞಾನಿಕ ಎಫ್‌ಆರ್‌ಪಿಯನ್ನು ನಿಗದಿ ಮಾಡುವ ಮೂಲಕ ಕೇಂದ್ರ ಸರ್ಕಾರ ಸಮಸ್ಯೆಯ ಮೂಲವಾಗಿ ಪರಿಣಮಿಸಿದೆ. ಅಚಾತುರ್ಯವನ್ನು ಸರಿಪಡಿಸಿಕೊಂಡು ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ನ. 26ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ’ ಎಂದರು.

ಪ್ರಮುಖರಾದ ಹಿಟ್ಟೂರು ರಾಜು, ಕೆ. ರಾಘವೇಂದ್ರ, ಸಿ.ಬಿ. ಹನುಮಂತಪ್ಪ, ಸಿ. ಚಂದ್ರಪ್ಪ, ಪಿ. ಶೇಖರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.