ADVERTISEMENT

ನಕ್ಸಲ್‌ ಹೋರಾಟಗಾರ ಬಿ.ಜಿ.ಕೃಷ್ಣಮೂರ್ತಿ ಕೋರ್ಟ್‌ಗೆ ಹಾಜರು; ಹೇಳಿಕೆ ದಾಖಲು

-

​ಪ್ರಜಾವಾಣಿ ವಾರ್ತೆ
Published 15 ಮೇ 2025, 14:45 IST
Last Updated 15 ಮೇ 2025, 14:45 IST
ಪೊಲೀಸ್ ಬಂದೋಬಸ್ತ್‌ನಲ್ಲಿ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಗುರುವಾರ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು
ಪೊಲೀಸ್ ಬಂದೋಬಸ್ತ್‌ನಲ್ಲಿ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಗುರುವಾರ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು   

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಮೂರು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಯಾಗಿರುವ ನಕ್ಸಲ್ ಹೋರಾಟಗಾರ, ಸದ್ಯ ಕೇರಳದ ತ್ರಿಶ್ಶೂರ್‌ ಕಾರಾಗೃಹದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಅವರನ್ನು ಗುರುವಾರ ಬಾಡಿ ವಾರೆಂಟ್‌ ಮೇಲೆ ಇಲ್ಲಿಗೆ ಕರೆತಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಲಯದಲ್ಲಿ ಹಾಜರುಪಡಿಸಲಾಯಿತು.

ಇದೇ ವೇಳೆ ಅವರ ಹೇಳಿಕೆ ದಾಖಲಿಸಿಕೊಳ್ಳಲಾಯಿತು.

ಬಿ.ಜಿ. ಕೃಷ್ಣಮೂರ್ತಿ ಅವರು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2009ರಲ್ಲಿ ಕಲ್ಲೂರು ಅಂಗಡಿ ಹೊಸಗದ್ದೆ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಸುಟ್ಟ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದು, ಅದೇ ವರ್ಷ ಬಿದರಗೋಡಿನ ಅರುಣ್‌ಕುಮಾರ್‌ ಅವರ ಮನೆಗೆ ದಾಳಿ ಮಾಡಿ ಅಡಿಕೆ ಚಪ್ಪರ ಸುಟ್ಟು ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾರೆ. ನೆಕ್ಕಾರು ಕಾಡಿನಲ್ಲಿ ಮದ್ದುಗುಂಡು, ಸ್ಫೋಟಕ, ಕರಪತ್ರ ವಶಪಡಿಸಿಕೊಂಡ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ.

ADVERTISEMENT

ಮೂರು ಪ್ರಕರಣಗಳ ವಿಚಾರಣೆ ಅಂಗವಾಗಿ ಆರೋಪಿಯ ಹೇಳಿಕೆ ಪಡೆಯಲಾಗಿದೆ. ಜೂನ್‌ 16ಕ್ಕೆ ವಿಚಾರಣೆ ಮುಂದೂಡಲಾಗಿದೆ. ವಾದ ಮಂಡನೆ ನಡೆಯಲಿದೆ ಎಂದು ಬಿ.ಜಿ.ಕೃಷ್ಣಮೂರ್ತಿ ಪರ ವಕೀಲ ಕೆ.ಪಿ.ಶ್ರೀಪಾಲ್‌ ಸುದ್ದಿಗಾರರಿಗೆ ತಿಳಿಸಿದರು.

ಪುಸ್ತಕಗಳನ್ನು ಪಡೆಯಲು ಅನುಮತಿ: 

ತಮ್ಮ ಕ್ಷಕಿದಾರ ಕನ್ನಡ ಸಾಹಿತ್ಯ ಹಾಗೂ ಕಾನೂನಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಲು ಇಚ್ಛಿಸಿದ್ದಾರೆ. ಅವುಗಳನ್ನು ಜೈಲಿಗೆ ಕೊಂಡೊಯ್ಯಲು ಅವಕಾಶ ನೀಡುವಂತೆ ಬಿ.ಜಿ. ಕೃಷ್ಣಮೂರ್ತಿ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು. ಬಿ.ಜಿ.ಕೃಷ್ಣಮೂರ್ತಿ ಅವರನ್ನು ಹಾಜರುಪಡಿಸುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.