ADVERTISEMENT

ಭದ್ರಾವತಿ ನಗರದಲ್ಲಿ ಇಕ್ಕಟ್ಟಿನ, ಅವ್ಯವಸ್ಥಿತ ರಸ್ತೆಗಳಿಂದ ಪಾದಾಚಾರಿಗಳ ಪರದಾಟ

ನಗರ ಸಭೆ ಕಚೇರಿ ಮುಂಭಾಗ ವಾಹನ ನಿಲುಗಡೆ; ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:41 IST
Last Updated 4 ಡಿಸೆಂಬರ್ 2025, 4:41 IST
ನಗರಸಭೆ ಕಚೇರಿ ಮುಂಭಾಗದ ಫುಟ್ ಪಾತ್ ಮೇಲೆ ದ್ವಿಚಕ್ರ ವಾಹನಗಳು ನಿಂತಿರುವುದು
ನಗರಸಭೆ ಕಚೇರಿ ಮುಂಭಾಗದ ಫುಟ್ ಪಾತ್ ಮೇಲೆ ದ್ವಿಚಕ್ರ ವಾಹನಗಳು ನಿಂತಿರುವುದು   

ಭದ್ರಾವತಿ: ನಗರದಲ್ಲಿ ಹೆಚ್ಚು ಜನದಟ್ಟಣೆ ಇರುವ ನಗರಸಭೆ ಕಾರ್ಯಾಲಯದ ಮುಂದೆ ವಾಹನಗಳ ನಿಲುಗಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ನಗರಸಭೆ ಕಾರ್ಯಾಲಯದ ಮುಂಭಾಗದ ರಸ್ತೆ ಬೆಂಗಳೂರು, ಹಾಸನ, ಮೈಸೂರು, ಅರಸೀಕೆರೆ ಮತ್ತು ಇತರೆಡೆ ಹೋಗುವ ಮುಖ್ಯ ಹೆದ್ದಾರಿಯಾಗಿದ್ದು, ಪ್ರತಿನಿತ್ಯ ಅಧಿಕ ಸಂಖ್ಯೆಯಲ್ಲಿ ಕೆಎಸ್ಆರ್‌ಟಿಸಿ ಬಸ್, ಕಾರ್ ಹಾಗು ಭಾರಿ ವಾಹನಗಳು ಸಂಚರಿಸುವ ಮಾರ್ಗವಾಗಿದೆ. ಇಲ್ಲಿ ಸಂಚರಿಸುವ ವಾಹನಗಳಿಗೆ ರಸ್ತೆ ಇಕ್ಕಟ್ಟಿನಿಂದ ಕೂಡಿದ್ದು, ಜೊತೆಗೆ ಪ್ರತಿದಿನ ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗುತ್ತಿದೆ.

ಈ ರಸ್ತೆ ಮೂಳಕವೇ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ತರಳಬೇಕಾಗಿದ್ದು, ಅಗತ್ಯ ಪರಿಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ವಾಹನ ಸಂಚರಿಸಲು ಸಹ ಅಡ್ಡಿಯಾಗುತ್ತಿದೆ.

ADVERTISEMENT

ನಗರಸಭೆ ಕಚೇರಿಯ ಅಕ್ಕಪಕ್ಕ ಹಲವು ಅಂಗಡಿ– ಮುಂಗಟ್ಟುಗಳು, ಬೇಕರಿ, ಹೋಟೆಲ್‌ಗಳು, ಹಣ್ಣಿನ ವ್ಯಾಪಾರದ ಅಂಗಡಿಗಳಿವೆ. ಅದರೊಂದಿಗೆ ಪ್ರತಿನಿತ್ಯ ದ್ವಿಚಕ್ರ ವಾಹನಗಳು ಸಾಲಾಗಿ ನಿಲ್ಲಿಸುವುದರಿಂದ ನಡೆದಾವುದಕ್ಕೂ ಸ್ಥಳ ಇಲ್ಲದಂತಾಗಿದೆ ಎಂಬುದು ಸಾರ್ವಜನಿಕರ ಅಳಲು.

ಜನಪ್ರತಿನಿಧಿಗಳ ವಾಹನಗಳೇ ಹೆಚ್ಚು:

‘ನಗರಸಭೆ ಸದಸ್ಯರು, ಮಾಜಿ ಸದಸ್ಯರು, ಅವರ ಅಭಿಮಾನಿಗಳು, ನಗರಸಭೆಯ ಕೆಲವು ಸಿಬ್ಬಂದಿ ತಮ್ಮ ವಾಹನಗಳನ್ನು ನಗರಸಭೆಯ ಮುಂಭಾಗ, ಫುಟ್‌ಪಾತ್‌ಗಳ ಮೇಲೆಯೇ ನಿಲ್ಲಿಸುತ್ತಿದ್ದಾರೆ. ಜನಪ್ರತಿನಿಧಿಗಳು ಶಿಸ್ತನ್ನು ಮರೆತು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ವಾಹನ ನಿಲ್ಲಿಸುವುದರಿಂದ ಫುಟ್‌ಪಾತ್‌ ಮೇಲೆ ಪಾದಾಚಾರಿಗಳು ಸಂಚರಿಸಲು ಸಮಸ್ಯೆಯಾಗಿದೆ’ ಎಂದು ಸ್ಥಳೀಯ ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾರ್ಕಿಂಗ್‌ಗೆ ಬೆಎಕು ಬದಲಿ ವ್ಯವಸ್ಥೆ:

ನಗರಸಭೆ ಸದಸ್ಯರಿಗೆ, ಮಾಜಿ ಸದಸ್ಯರಿಗೆ, ಸಿಬ್ಬಂದಿಗೆ, ನಗರಸಭೆ ಕಾರ್ಯಾಲಯಕ್ಕೆ ಕಾರ್ಯನಿಮಿತ್ತ ಬರುವ ಸಾರ್ವಜನಿಕರಿಗೆ ಪ್ರತ್ಯೇಕ ದ್ವಿಚಕ್ರ ವಾಹನ ನಿಲ್ದಾಣ ನಿರ್ಮಾಣ ಮಾಡಲಾಗಿದೆ.

ಅದಕ್ಕೆ ಕನಿಷ್ಠ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಶುಲ್ಕ ಇನ್ನೂ ಜಾರಿಗೆ ಬಂದಿಲ್ಲ. ಆದರೂ ಈ ನಿಲ್ದಾಣದಲ್ಲಿ ನಗರಸಭೆಗೆ ಸಂಬಂಧಪಟ್ಟವರು ಯಾರೂ ವಾಹನ ನಿಲುಗಡೆ ಮಾಡುತ್ತಿಲ್ಲ. ಬದಲಿಗೆ ಶಿವಮೊಗ್ಗ ಮತ್ತಿತರೆ ಊರುಗಳಿಗೆ ತೆರಳುವ ವಾಹನ ಮಾಲೀಕರು ತಮ್ಮ ವಾಹನಗಳನ್ನು ಬೆಳಗಿನಿಂದ ಸಂಜೆಯವರೆಗೂ ನಿಲ್ಲಿಸಿ, ಬೇರೆ ಊರುಗಳಿಗೆ ತೆರಳುತ್ತಿದ್ದಾರೆ. ಇಲ್ಲಿ ನೂತನವಾಗಿ ನಿರ್ಮಾಣಗೊಂಡ ದ್ವಿಚಕ್ರ ವಾಹನ ಪಾರ್ಕಿಂಗ್‌ ಉದ್ದೇಶವೇ ಬದಲಾಗಿದೆ ಎಂಬುದು ವ್ಯಾಪಾರಸ್ಥರೊಬ್ಬರ ಅಭಿಪ್ರಾಯ.

ಈ ಪ್ರದೇಶದಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಪಾರ್ಕಿಂಗ್‌ಗೆ ಸ್ಥಳದ ಕೊರತೆ ಇದೆ. ರಸ್ತೆ ತೀರಾ ಚಿಕ್ಕದಾಗಿದ್ದು, ನೋ ಪಾರ್ಕಿಂಗ್ ಬೋರ್ಡ್ ಹಾಕಿದರೆ ನಾಲ್ಕು ಚಕ್ರದ ವಾಹನಗಳಿಗೆ ಬದಲಿ ನಿಲ್ದಾಣದ ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ, ಈ ಪ್ರದೇಶದಲ್ಲಿ ಸ್ಥಳದ ಅಭಾವ ಹೆಚ್ಚಿದೆ ಎಂದು ಪಿಎಸ್‌ಐ ಚಂದ್ರಶೇಖರ್ ತಿಳಿಸಿದರು.

ನಗರ ಮತ್ತು ಭೂ ಸಾರಿಗೆ ಅನುದಾನದಲ್ಲಿ ದ್ವಿಚಕ್ರ ವಾಹನ ನಿಲುಗಡೆಗಾಗಿ ಕನಿಷ್ಠ ಶುಲ್ಕ ನಿಗದಿಪಡಿಸಿ, ನಗರಸಭೆ ಕಚೇರಿಯ ಪಕ್ಕದ ರಸ್ತೆಯಲ್ಲಿಯೇ ನಿಲ್ದಾಣ ನಿರ್ಮಿಸಲಾಗಿದೆ. ದ್ವಿಚಕ್ರ ವಾಹನ ಮಾಲೀಕರು ನಿಗದಿತ ನಿಲ್ದಾಣದಲ್ಲಿ ನಿಲುಗಡೆ ಮಾಡದೆ ನಿರ್ಲಕ್ಷ್ಯ ಮನೋಭಾವ ತೋರುತ್ತಿದ್ದಾರೆ. ₹ 1.60 ಕೋಟಿ ಅನುದಾನದಲ್ಲಿ ಈ ನೂತನ ದ್ವಿಚಕ್ರ ವಾಹನ ನಿಲ್ದಾಣ ನಿರ್ಮಿಸಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.

ಕಳೆದ ಬಾರಿ ಪೊಲೀಸರು, ನಗರಸಭೆ ಹಿರಿಯ ಸದಸ್ಯರು, ಸಿಬ್ಬಂದಿ ಜೊತೆ ಸಭೆ ನಡೆಸಿ ನಗರಸಭೆ ಮುಂಭಾಗದಲ್ಲಿ, ಅಕ್ಕಪಕ್ಕದ ಜಾಗದಲ್ಲಿ ಬ್ಯಾರಿಕೇಡ್‌ ಅಳವಡಿಸಿ ವಾಹನ ನಿಲುಗಡೆ ನಿಯಂತ್ರಿಸಲು ಪ್ರಯತ್ನಿಸಲಾಗಿತ್ತು. ಆದರೂ ಪ್ರಯೋಜನವಾಗುತ್ತಿಲ್ಲ ಎಂದು ನಗರಸಭೆಯ ಎಂಜಿನಿಯರ್ ಪ್ರಸಾದ್ ‘ಪ್ರಜಾವಾಣಿ’ಗೆ ವಿವರಿಸಿದರು.

ನಗರಸಭೆ ಕಚೇರಿಯ ಮುಂಭಾಗದ ಹೆದ್ದಾರಿಯಲ್ಲಿ ವಾಹನಗಳು ನಿಂತಿರುವುದು
ನಗರಸಭೆ ಕಚೇರಿಯ ಮುಂಭಾಗ ದ್ವಿಚಕ್ರ ವಾಹನಗಳು ಶಿಸ್ತಿಲ್ಲದೆ ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.